ಪಿಲಿಭಿತ್ (ಉತ್ತರ ಪ್ರದೇಶ):ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಸ್ಕೂಟಿಗೆ ಕಾರು ಡಿಕ್ಕಿಯಾಗಿ 4 ಕಿ.ಮೀ ಎಳೆದೊಯ್ದು ಯುವತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಇದೀಗ ಉತ್ತರಪ್ರದೇಶದಲ್ಲಿ ಪತಿಯೊಬ್ಬ ಪಾನಮತ್ತನಾಗಿ ಗರ್ಭಿಣಿ ಪತ್ನಿಯನ್ನು ಬೈಕ್ಗೆ ಕಟ್ಟಿ 200 ಮೀಟರ್ ಎಳೆದೊಯ್ದು ಕ್ರೌರ್ಯ ಮೆರೆದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ:ಈ ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯ ಘುಂಗ್‌ಚೈ ಗ್ರಾಮದಲ್ಲಿ. ಆರೋಪಿ ರಾಮ್ಗೋಪಾಲ್ ಶನಿವಾರ ಪಾನಮತ್ತನಾಗಿ ಮನೆಗೆ ಬಂದಾಗ ಗರ್ಭಿಣಿ ಪತ್ನಿ ವಿರೋಧಿಸಿದ್ದಾಳೆ. ಇದರಿಂದ ಕುಪಿತನಾದ ಆತ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇಷ್ಟಕ್ಕೆ ಬಿಡದ ಕ್ರೂರಿ ಆಕೆಯನ್ನು ತನ್ನ ಬೈಕ್ಗೆ ಕಟ್ಟಿ ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.
ಪತ್ನಿಯನ್ನು ಎಳೆದೊಯ್ಯುತ್ತಿದ್ದುದನ್ನು ಜನರು ಕಂಡು ನಿಲ್ಲಿಸಲು ಯತ್ನಿಸಿದರೂ ಆತ, 200 ಮೀಟರ್ ದೂರ ಮಹಿಳೆಯನ್ನು ಎಳೆದೊಯ್ದಿದ್ದಾನೆ. ಮಹಿಳೆಯ ಸಹೋದರ ಬೈಕ್ ಬೆನ್ನತ್ತಿ ಸಹೋದರಿಯನ್ನು ರಕ್ಷಿಸಿದ್ದಾನೆ. ಗಾಯಗೊಂಡ ಆಕೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಆರೋಪಿ ರಾಮ್ಗೋಪಾಲ್ ಮತ್ತು ಹಲ್ಲೆಗೊಳಗಾದ ಗರ್ಭಿಣಿ ಸುಮನ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ಜೋಡಿ ಪ್ರೀತಿಸಿ ವಿವಾಹವಾಗಿದ್ದರು ಎಂಬುದು ವಿಶೇಷ. ಮದುವೆಯಾದ ಕೆಲ ದಿನಗಳಲ್ಲಿ ಆರೋಪಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದ. 8 ತಿಂಗಳ ಗರ್ಭಿಣಿ ಎನ್ನದೇ, ಕುಡಿತದ ಚಟವನ್ನು ಪ್ರಶ್ನಿಸಿದ್ದಕ್ಕೆ ಕ್ರೂರತ್ವ ಮೆರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ, ಕೊಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.