ಥಾಣೆ (ಮಹಾರಾಷ್ಟ್ರ) : ಬುಡಕಟ್ಟು ಮಹಿಳೆಯೊಬ್ಬರನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಹೆರಿಗೆ ಆಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಶಾಹಾಪುರ್ ತಾಲೂಕಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ, ಮಹಿಳೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ್ದಾರೆ.
ಗ್ರಾಮಕ್ಕೆ ರಸ್ತೆ ಸೌಲಭ್ಯವಿಲ್ಲ: ಕಳೆದ ಬಾನುವಾರ ಪಾಟಿಕಚಾ ಪಾಡ ಗ್ರಾಮದ ಪ್ರಣಾಲಿ ಗುರುನಾಥ್ ವಾಜೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗ್ರಾಮದಲ್ಲಿ ಸರಿಯಾದ ರಸ್ತೆ ಸೌಲಭ್ಯ ಇಲ್ಲದ ಕಾರಣ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆತರುತ್ತಿದ್ದರು. ಸುಮಾರು 4 ಕಿ.ಮೀ ಗುಡ್ಡಗಾಡು ಪ್ರದೇಶಗಳನ್ನು ದಾಟಿ ಆಸ್ಪತ್ರೆಗೆ ಹೋಗುವಾಗ ಹೆರಿಗೆ ನೋವು ಹೆಚ್ಚಾಗಿದೆ. ಸಂಬಂಧಿಕರು ಆಶಾ ಕಾರ್ಯಕರ್ತೆಯರ ಸಹಾಯದಿಂದ ಹೆರಿಗೆ ಮಾಡಿಸಿದ್ದಾರೆ. ಮಹಿಳೆಯನ್ನು ಕಾಸರ ಪ್ರೈಮರಿ ಹೆಲ್ತ್ ಸೆಂಟರ್ಗೆ ದಾಖಲಿಸಲಾಗಿದೆ. ಕುಗ್ರಾಮದಿಂದ ಇಲ್ಲಿಗೆ ಕರೆತರುವಾಗ ಸಾಕಷ್ಟು ಕಷ್ಟಪಟ್ಟಿದ್ದಾಗಿ ಗ್ರಾಮಸ್ಥರು ತಿಳಿಸಿದರು. ಸದ್ಯ ಮಹಿಳೆ ಮತ್ತು ಮಗು ಸುರಕ್ಷಿತರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಿಎಂ ಏಕನಾಥ್ ಶಿಂಧೆ ದತ್ತು ಪಡೆದ ಗ್ರಾಮ!:ಕುಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ಕ್ರಮಿಸಿ ಆಸ್ಪತ್ರೆಗೆ ಬರಬೇಕಾದ ದುಸ್ಥಿತಿ ಇಲ್ಲಿನ ಜನರದ್ದು. ಈ ಗ್ರಾಮವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ದತ್ತು ಪಡೆದುಕೊಂಡಿದ್ದರೂ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮಾತ್ರ ಇಂದಿಗೂ ಮರೀಚಿಕೆ. ವಿದ್ಯುತ್, ರಸ್ತೆ ಸಂಪರ್ಕ, ನೀರು ಮತ್ತು ಆರೋಗ್ಯ ಮುಂತಾದ ಮೂಲಸೌಕರ್ಯಗಳ ಕೊರತೆಯಿದ್ದು, ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.