ಭೋಪಾಲ್:ಮಧ್ಯಪ್ರದೇಶ ಸರ್ಕಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ವೇಳೆ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ನಾಲ್ವರು ಮಹಿಳೆಯರು ಗರ್ಭಿಣಿಯರಾಗಿರುವುದು ಪತ್ತೆಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
"ಮುಖ್ಯಮಂತ್ರಿ ಕನ್ಯಾ ವಿವಾಹ" ಯೋಜನೆಯಡಿ 219 ಜೋಡಿಗೆ ಸಾಮೂಹಿಕ ವಿವಾಹವನ್ನು ಅಕ್ಷಯ ತೃತೀಯ ದಿನದಂದು ದಿಂಡೋರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇೆಳೆ, ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನಾಲ್ವರು ಮಹಿಳೆಯರು ಗರ್ಭಿಣಿಯರಾಗಿರುವುದು ಪತ್ತೆಯಾಗಿದೆ. ಇದನ್ನು ವಿರೋಧಿಸಿದ ಕಾಂಗ್ರೆಸ್ ಶಾಸಕ ಓಂಕಾರ್ ಸಿಂಗ್ ಮಾರ್ಕಮ್ ಸರ್ಕಾರ ಏಕೆ ವೈದ್ಯಕೀಯ ಪರೀಕ್ಷೆ ನಡೆಸಿತು. ಇದು ಬಡ ಹೆಣ್ಣು ಮಕ್ಕಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ.
ಘಟನೆಯ ವಿವರ:ವರದಿಗಳ ಪ್ರಕಾರ ಅಕ್ಷಯ ತೃತೀಯ ದಿನ(ಶನಿವಾರ)ದಂದುಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ದಿಂಡೋರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ವಧುವಿಗೆ 51 ಸಾವಿರ ರೂ. ಅನುದಾನ ನೀಡುವ ಸಾಮೂಹಿಕ ವಿವಾಹ ಯೋಜನೆಯಾದ "ಮುಖ್ಯಮಂತ್ರಿ ಕನ್ಯಾ ವಿವಾಹ" ಅರ್ಹತೆಯ ಭಾಗವಾಗಿ "ಗರ್ಭಧಾರಣೆ ಪರೀಕ್ಷೆ" ನಡೆಸಿದೆ. ಇದರಿಂದ ವಿವಾದ ಭುಗಿಲೆದ್ದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಮಾಜಿ ಸಿಎಂ ಕಮಲ್ ನಾಥ್ ಆಗ್ರಹಿಸಿದ್ದಾರೆ.
ಸ್ತ್ರೀ ದ್ವೇಷದ ಮನೋಭಾವ:"ದಿಂಡೋರಿ ಜಿಲ್ಲೆಯಲ್ಲಿ 'ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆ' ಅಡಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ 200 ಮಹಿಳೆಯರಿಗೆ ಗರ್ಭಧಾರಣೆಯ ಪರೀಕ್ಷೆ ನಡೆಸಲಾಗಿದೆ ಎಂಬ ವರದಿಗಳಿವೆ. ಇದು ನಿಜವೇ ಎಂದು ನಾನು ಮುಖ್ಯಮಂತ್ರಿಯಿಂದ ತಿಳಿದುಕೊಳ್ಳಲು ಬಯಸುತ್ತೇನೆ. ಇದು ನಿಜವಾಗಿದ್ದರೆ, ಯಾರ ಸೂಚನೆಯ ಮೇರೆಗೆ ಇಂತಹ ಅತಿರೇಕದ ಅವಮಾನಕ್ಕೆ ಮಹಿಳೆಯರು ಒಳಗಾಗಿದ್ದಾರೆ?. ಬಡ ಮತ್ತು ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಸಿಎಂ ದೃಷ್ಟಿಯಲ್ಲಿ ಗೌರವವಿಲ್ಲವೇ? ಎಂದು ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ.
"ಪ್ರಸ್ತುತ ಆಡಳಿತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಪ್ರದೇಶ ಈಗಾಗಲೇ ಅಗ್ರಸ್ಥಾನದಲ್ಲಿದೆ. ಈ ವಿಷಯದ ಬಗ್ಗೆ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇದು ಕೇವಲ ಗರ್ಭಧಾರಣೆಯ ಪರೀಕ್ಷೆಗಳಿಗೆ ಸೀಮಿತವಾದ ಸಮಸ್ಯೆಯಲ್ಲ. ಮಹಿಳೆಯರ ಬಗೆಗಿನ ಸ್ತ್ರೀ ದ್ವೇಷದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗೆ ಮಾಡಿದ ಅವಮಾನ:ದಿಂಡೋರಿಯ ಕಾಂಗ್ರೆಸ್ ಶಾಸಕ ಓಂಕಾರ್ ಸಿಂಗ್ ಮಾರ್ಕಮ್ "ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾನೆಯೇ ಎಂದು ನಿರ್ಧರಿಸಲು ಯಾವುದೇ ನಿಯಮಗಳಿದ್ದರೆ, ಅದನ್ನು ಸರ್ಕಾರವು ಸಾರ್ವಜನಿಕಗೊಳಿಸಬೇಕು. ಇದು ಅವಹೇಳನಕಾರಿ ಮತ್ತು ಇದು ಬಡ ಜನರಿಗೆ ಅಗೌರವವಾಗಿದೆ. ಪರೀಕ್ಷಾ ವರದಿಗಳನ್ನು ಸಾರ್ವಜನಿಕಗೊಳಿಸಿದ ಮಹಿಳೆಯರ ಭವಿಷ್ಯ ಏನಾಗುತ್ತದೆ"? ಎಂದು ಪ್ರಶ್ನಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿ 219 ಜೋಡಿ:ಏ. 22 ರಂದು ದಿಂಡೋರಿ ಜಿಲ್ಲೆಯ ಗಡಸಾರಿಯಲ್ಲಿ ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಒಬಿಸಿ ಕುಟುಂಬಗಳ ಒಟ್ಟು 219 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಡಿಂಡೋರಿ ಜಿಲ್ಲಾಡಳಿತ ತಿಳಿಸಿದೆ.
"ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆ ಅಡಿ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ದಂಪತಿಗಳಿಗೆ ನಗದು ಪ್ರಯೋಜನಗಳು ಮತ್ತು ಗೃಹಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ಅರ್ಜಿ ಸಲ್ಲಿಸಿ ಮದುವೆಗೆ ಬಂದಿದ್ದ 4 ಮಹಿಳೆಯರು ಗರ್ಭಿಣಿಯರಾದ ಹಿನ್ನೆಲೆ ಅವರಿಗೆ ಮದುವೆ ಅವಕಾಶವನ್ನು ನಿರಾಕರಿಸಲಾಗಿದೆ. ಗರ್ಭಾವಸ್ಥೆಯ ಪರೀಕ್ಷೆಗಳು ರೂಢಿಯಲ್ಲ. ದಂಪತಿಗಳು ತಾವು ಅವಿವಾಹಿತರು ಮತ್ತು ಯೋಜನೆಯಡಿಯಲ್ಲಿ ಪ್ರಯೋಜನಗಳಿಗೆ ಅರ್ಹರು ಎಂದು ಅಫಿಡವಿಟ್" ನೀಡಬೇಕು.
ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಕೆಲವು ವಧುಗಳು ಪಿರಿಯಡ್ಸ್ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಬಳಿಕ ಗರ್ಭಧಾರಣೆಯ ಪರೀಕ್ಷೆ ನಡೆಸಲಾಯಿತು ಎಂದು ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಗರ್ಭಧಾರಣೆ ಪರೀಕ್ಷೆಯನ್ನು ನಡೆಸಲು ಆಡಳಿತದಿಂದ ಯಾವುದೇ ನಿರ್ದೇಶನವಿಲ್ಲ. ವಿವಾಹದ ವೇಳೆ ಸಿಕಲ್ ಸೆಲ್ ಅನಿಮೀಯಾ ಪತ್ತೆ ಮಾಡುವ ಪರೀಕ್ಷೆ ವೇಳೆ ನಾಲ್ವರು ಗರ್ಭಿಣಿಯರು ಪತ್ತೆಯಾಗಿದ್ದಾರೆ. ಅವರಿಗೆ ಮದುವೆ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನೇಕ ಮಹಿಳೆಯರಿಗೆ ಪ್ರೇಮ ಪ್ರಕರಣಗಳಿರುತ್ತವೆ. ಇದು ಮದುವೆಯ ನಂತರ ವಿವಾದಗಳಿಗೆ ಕಾರಣವಾಗಬಹುದು. ಈ ಕಾರಣದಿಂದಾಗಿ ದಂಪತಿಗಳು ಪರಸ್ಪರ ಮದುವೆಗೆ ಒಪ್ಪಿದ್ದಾರೆ ಎಂದು ಸ್ಪಷ್ಟಪಡಿಸಲು ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ್ರೆ ಸಾಮಾಜಿಕ, ಧಾರ್ಮಿಕ ನಂಬಿಕೆಗಳ ಮೇಲೆ ಪರಿಣಾಮ: ಬಾರ್ ಕೌನ್ಸಿಲ್ ಆಫ್ ಇಂಡಿಯಾ