ಪಣಜಿ(ಗೋವಾ):ಬಿಜೆಪಿಯ ವಿರುದ್ಧ ಕೆಲವು ವರ್ಗಗಳು ಕೋಪಗೊಂಡಿವೆ ಎಂದ ಮಾತ್ರಕ್ಕೆ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಭಾವಿಸುವುದು ತಪ್ಪು. ಬಿಜೆಪಿ ಇಲ್ಲಿಯೇ ಉಳಿಯುತ್ತದೆ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ರಾಜಕೀಯ ತಂತ್ರಜ್ಞ ಮತ್ತು ಮಮತಾ ಬ್ಯಾನರ್ಜಿಯವರ ಚುನಾವಣಾ ಸಲಹೆಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಗೋವಾದಲ್ಲಿ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಸಂವಾದವೊಂದರಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ದೇಶದ ರಾಜಕೀಯದ ಕೇಂದ್ರಬಿಂದುವಾಗಿ ಬಿಜೆಪಿ ಉಳಿಯಲಿದೆ. ಗೆಲ್ಲಲಿ ಅಥವಾ ಸೋಲಲಿ ಅದು ಎಲ್ಲಿಯೂ ಹೋಗುವುದಿಲ್ಲ. ಕಾಂಗ್ರೆಸ್ ಸುಮಾರು 40 ವರ್ಷ ರಾಜಕೀಯದಲ್ಲಿ ಸಕ್ರಿಯವಾದಂತೆ, ಬಿಜೆಪಿಯೂ ಇರಲಿದೆ ಎಂದಿದ್ದಾರೆ.
ಮೋದಿಯನ್ನು ಕೆಲವು ವರ್ಗಗಳು ದ್ವೇಷಿಸುತ್ತವೆ ಎಂದಮಾತ್ರಕ್ಕೆ ಮೋದಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಭಾವಿಸುವುದು ತಪ್ಪು. ಅಂತಹ ತಪ್ಪು ಕಲ್ಪನೆಯಲ್ಲಿ ಜನರು ಬೀಳಬಾರದು. ಒಂದು ವೇಳೆ ಅಧಿಕಾರ ಕಳೆದುಕೊಂಡರೂ ಕೂಡಾ ಸುಮಾರು ದಶಕಗಳವರೆಗೆ ಬಿಜೆಪಿ ಅಸ್ತಿತ್ವದಲ್ಲಿರುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ನಲ್ಲಿರುವ ರಚನಾತ್ಮಕ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರವಿಲ್ಲ ಎಂದು ಹೇಳಿಕೆ ನೀಡಿದ್ದ ಪ್ರಶಾಂತ್ ಕಿಶೋರ್ ಈಗ ಜನರು ಮೋದಿ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಎಂದು ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ ಎಂದಿದ್ದಾರೆ.
ಪ್ರಶಾಂತ್ ಕಿಶೋರ್ ಮಾತನಾಡಿದ ವಿಡಿಯೋ ತುಣುಕೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಬಿಜೆಪಿ ಮಾಧ್ಯಮ ವಕ್ತಾರ ಅಜಯ್ ಶೆಹ್ರಾವತ್, ಮುಂದಿನ ಕೆಲವು ದಶಕಗಳವರೆಗೆ ಬಿಜೆಪಿ ಶಕ್ತಿಶಾಲಿಯಾಗಿ ಮುಂದುವರೆಯಲಿದೆ ಎಂದು ಒಪ್ಪಿಕೊಂಡಿದ್ದಾರೆ. ಇದನ್ನು ಅಮಿತ್ ಶಾ ಮೊದಲೇ ಹೇಳಿದ್ದರು ಎಂದು ಉಲ್ಲೇಖಿಸಿದ್ದಾರೆ.
ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಕೂಡಾ ಸ್ಪರ್ಧಿಸಲು ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೋವಾದಲ್ಲಿ ಗುರುವಾರದಿಂದ ಮೂರು ದಿನಗಳ ಪ್ರವಾಸ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯವರ ಚುನಾವಣಾ ಸಲಹೆಗಾರ ಪ್ರಶಾಂತ್ ಕಿಶೋರ್ ಕೂಡಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಇದನ್ನೂ ಓದಿ:ಕೋವಿಡ್ ಡೆಲ್ಟಾ ವೈರಸ್ ಉಪ ಉಪಾಂತರಿ: ವಿದೇಶಗಳಲ್ಲಿ ಉಲ್ಬಣ, ಭಾರತಕ್ಕೆ ಆತಂಕವಿಲ್ಲ