ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲು ನಿರಾಕರಿಸಿದ್ದಾರೆ. ಆದರೆ, ಚುನಾವಣೆ ಗೆಲ್ಲಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದ್ದಾರೆ. ಸಮಸ್ಯೆ ಬಗೆಹರಿಸಲು ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ. ಇದೀಗ, ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. ಪಕ್ಷ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳಲು ಶಕ್ತವಾಗಿದೆ ಎಂದು ನುಡಿದಿದ್ದಾರೆ.
ಏನು ಹೇಳಬೇಕೋ ಅದನ್ನು ಹೇಳಿದ್ದೇನೆ:ಪಕ್ಷದಲ್ಲಿ ಯಾವುದೇ ಪಾತ್ರ ವಹಿಸಲು ಬಯಸುವುದಿಲ್ಲ. ಆದರೆ ಭವಿಷ್ಯದ ನೀಲನಕ್ಷೆಯನ್ನು ಸಿದ್ಧಪಡಿಸಿದ ನಂತರ ಅದನ್ನು ಕಾರ್ಯಗತಗೊಳಿಸಬೇಕೆಂದು ಬಯಸಿದ್ದಾರೆ. ನಾನು ಅವರಿಗೆ ಏನು ಹೇಳಬೇಕೆಂದುಕೊಂಡೆನೋ ಅದನ್ನು ಹೇಳಿದ್ದೇನೆ. 2014ರಿಂದ ಹಿಡಿದು ಈವರೆಗಿನ ವಾತಾವರಣ ಗಮನಿಸಿದರೆ, ಇದೀಗ ಮೊದಲ ಬಾರಿಗೆ ಪಕ್ಷವು ತನ್ನ ಭವಿಷ್ಯದ ಬಗ್ಗೆ ರಚನಾತ್ಮಕ ರೀತಿಯಲ್ಲಿ ಚರ್ಚಿಸಿದೆ. ಆದರೆ ಸಬಲೀಕರಕ್ಕೆ ಕ್ರಿಯಾ ಗುಂಪಿನ ಬಗ್ಗೆ ನನಗೆ ಕೆಲವು ಅನುಮಾನವಿತ್ತು. ನಾನು ಪಕ್ಷದ ಭಾಗವಾಗಬೇಕೆಂದು ಅವರು ಬಯಸಿದ್ದರು, ಆದರೆ ನಾನು ಇಲ್ಲ ಎಂದು ಹೇಳಿದೆಯೆಂದು ಇದೇ ವೇಳೆ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆ ವಿಫಲವಾದ ನಂತರ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲು ಪ್ರಶಾಂತ್ ಕಿಶೋರ್ ಬಯಸಿದ್ದರು ಎಂದು ಹೇಳಲಾಗಿದೆ. ಆದರೆ, ಪಕ್ಷ ಒಪ್ಪಲಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, ಪಕ್ಷಕ್ಕೆ ನೀಡಿರುವ ನಾಯಕತ್ವ ಸೂತ್ರದಲ್ಲಿ ರಾಹುಲ್ ಗಾಂಧಿ ಹೆಸರಾಗಲಿ, ಪ್ರಿಯಾಂಕಾ ಗಾಂಧಿ ಅವರ ಹೆಸರಾಗಲಿ ಇರಲಿಲ್ಲ. ವೈಯಕ್ತಿಕವಾಗಿ ಏನನ್ನು ಪ್ರಸ್ತಾಪಿಸಲಾಗಿದೆ ಎಂಬುದನ್ನು ನಾನು ಹೇಳಲಾರೆ ಎಂದರು.