ನವ ದೆಹಲಿ:ದೇಶದ ರಾಜಕೀಯದಲ್ಲಿ ಚುನಾವಣಾ ಕಾರ್ಯತಂತ್ರಗಳ ಚತುರ ಎಂದೇ ಬಿಂಬಿಸಲ್ಪಟ್ಟ ಪ್ರಶಾಂತ್ ಕಿಶೋರ್ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇವರು ಎಲ್ಲಿ ಪ್ರತ್ಯಕ್ಷವಾದ್ರೂ ಅಲ್ಲಿ ಹತ್ತು ಹಲವು ರೀತಿಯ ಊಹಾಪೋಹಗಳು ಸೃಷ್ಟಿಯಾಗುತ್ತಿವೆ.
ಈ ನಡುವೆ ಎನ್‌ಸಿಪಿ ನಾಯಕ ಶರದ್ ಪವರ್ ಅವರನ್ನು ಭೇಟಿ ಮಾಡಿ ಬಿಜೆಪಿ ವಿರುದ್ಧದ ಮುಂದಿನ ಲೋಕಸಭೆ ಚುನಾವಣೆಗೆ ಅಖಾಡ ಸಜ್ಜು ಮಾಡಲು ಪ್ರಶಾಂತ್ ಕಿಶೋರ್ ಪಾತ್ರಗಳನ್ನು ಪೋಷಿಸುತ್ತಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು.
ಪಿಕೆ ನಿನ್ನೆಯಷ್ಟೇ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಿನ್ನೆ ಭೇಟಿ ಮಾಡಿದ್ದರು. ಇದರಿಂದಾಗಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆಂಬ ಚರ್ಚೆ ದೆಹಲಿ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಕಾರ್ಯತಂತ್ರಗಳನ್ನು ರೂಪಿಸಲು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಪ್ರಶಾಂತ್ ಕಿಶೋರ್, ಗಾಂಧಿ ಕುಟುಂಬವನ್ನು ಭೇಟಿಯಾಗಿರುವುದು ಇದೇ ಮೊದಲಲ್ಲ ಎಂತಲೂ ಮೂಲಗಳು ಹೇಳಿವೆ. ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಚುನಾವಣೆ ಸಂಬಂಧ ಮಾತುಕತೆ ನಡೆಸಲು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕಿಂತಲೂ ದೊಡ್ಡ ಯೋಜನೆಯನ್ನು ಅವರೀಗ ರೂಪಿಸುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸುವ ಬಗ್ಗೆ ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.