ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿರುವ ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಇದೀಗ ಪಕ್ಷ ಸೇರಲು ಹಿಂದೇಟು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ಮುಖಂಡ ರಂದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
'ಶ್ರೀ ಪ್ರಶಾಂತ್ ಕಿಶೋರ್ ಅವರೊಂದಿಗೆ ಪ್ರಸ್ತುತ ರಾಜಕೀಯ ಚರ್ಚೆಯ ನಂತರ ಕಾಂಗ್ರೆಸ್ ಅಧ್ಯಕ್ಷರು ಮುಂಬರುವ ಲೋಕಸಭಾ ಚುನಾವಣೆಗೋಸ್ಕರ 'ಎಂಪವರ್ಡ್ ಆ್ಯಕ್ಷನ್ ಗ್ರೂಪ್ 2024' ರಚನೆ ಮಾಡಿದ್ದಾರೆ. ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಆ ಗುಂಪಿನ ಭಾಗವಾಗಲು ಕಿಶೋರ್ ಅವರಿಗೆ ಪಕ್ಷ ಸೇರ್ಪಡೆಗೋಸ್ಕರ ಆಹ್ವಾನ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದರು. ಪಕ್ಷಕ್ಕಾಗಿ ಅವರು ನೀಡಿರುವ ಸಲಹೆಗಳನ್ನು ನಾವು ಪ್ರಶಂಸಿಸುತ್ತೇವೆ' ಎಂದಿದ್ದಾರೆ.
ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ರಚನೆ ಮಾಡಲಾಗಿದ್ದ ಸಮಿತಿಯೊಂದು ತನ್ನ ವರದಿಯನ್ನು ನಿನ್ನೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಿತ್ತು. ಇದರಲ್ಲಿ ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಈ ಮಹತ್ವದ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ:ಮುಂದುವರೆದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಸಸ್ಪೆನ್ಸ್.. ಕುತೂಹಲ ಮೂಡಿಸಿದ ಸೋನಿಯಾ ನಡೆ!
2024ರ ಲೋಕಸಭಾ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಕೈ ಪರವಾಗಿ ಕೆಲಸ ಮಾಡಲು ಈಗಾಗಲೇ ಒಪ್ಪಿಕೊಂಡಿದ್ದಾರೆ.
ಪ್ರಶಾಂತ್ ಕಿಶೋರ್ ಟ್ವಿಟ್:ಕಾಂಗ್ರೆಸ್ ಪಕ್ಷ ಸೇರಿಕೊಂಡು ಚುನಾವಣಾ ಜವಾಬ್ದಾರಿ ತೆಗೆದುಕೊಳ್ಳಲು ಕಾಂಗ್ರೆಸ್ ನೀಡಿರುವ ಆಫರ್ ಅನ್ನು ನಾನು ನಿರಾಕರಿಸಿದ್ದೇನೆ. ನನ್ನ ಪ್ರಕಾರ, ಕಾಂಗ್ರೆಸ್ಗೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿ ಬೇಕಿದೆ. ಪರಿವರ್ತನೆಯ ಸುಧಾರಣೆಗಳ ಮೂಲಕ ಪಕ್ಷದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳನ್ನು ಬಗೆಹರಿಸಲು ಉತ್ತಮ ನಾಯಕತ್ವ ಅಗತ್ಯ ಎಂದಿದ್ದಾರೆ.
ಪ್ರಶಾಂತ್ ಕಿಶೋರ್ ಈಗಾಗಲೇ ಪ್ರಧಾನಿ ಮೋದಿ, ಜೆಡಿಯು, ವೈಎಸ್ಆರ್ ಕಾಂಗ್ರೆಸ್, ಡಿಎಂಕೆ ಮತ್ತು ಟಿಆರ್ಎಸ್ ಜೊತೆ ಕಾರ್ಯ ನಿರ್ವಹಿಸಿದ್ದು, ಇದೀಗ ಕಾಂಗ್ರೆಸ್ ಜೊತೆಗಿರುವ ಕಾರಣ ಅನೇಕ ಸಮಸ್ಯೆಗಳು ಎದುರಾಗಿವೆ. ಒಂದು ವೇಳೆ ಕೈ ಪಕ್ಷ ಸೇರಿದರೆ, ಉಳಿದ ಪ್ರಾದೇಶಿಕ ಪಕ್ಷಗಳ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕಾಗುತ್ತದೆ. ಇದೇ ವಿಚಾರವಾಗಿ ಅವರೊಂದಿಗೆ ಮಾತುಕತೆ ಸಹ ನಡೆದಿದೆ. 2014ರಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಅವರು ಮುಖ್ಯಮಂತ್ರಿ ಕೆಸಿಆರ್ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದು, ಹೀಗಾಗಿ ಕಾಂಗ್ರೆಸ್ ಪಕ್ಷದ ಕೆಲವರು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.