ಹೈದರಾಬಾದ್ (ತೆಲಂಗಾಣ): ತನ್ನ ಆನ್‌ಲೈನ್ ಗೆಳತಿಯನ್ನು ಭೇಟಿಯಾಗಲು 2019ರಲ್ಲಿ ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಪ್ರಶಾಂತ್ ಎಂಬ ಹೈದರಾಬಾದ್ ಮೂಲದ ಯುವಕನನ್ನು ನಾಲ್ಕು ವರ್ಷದ ಬಳಿಕ ಪಾಕಿಸ್ತಾನ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ.
ದೆಹಲಿಯಿಂದ ಮಾಧಾಪುರ ಪೊಲೀಸರು ಯುವಕನನ್ನು ಕರೆತಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಮಾತನಾಡಿರುವ ಸೈಬರಾಬಾದ್ ಸಿಪಿ ಸಜ್ಜನರ್, ಪ್ರಶಾಂತ್ ಬಿಡುಗಡೆಗಾಗಿ ಸಹಕರಿಸಿದ್ದ ಕೇಂದ್ರ, ರಾಜ್ಯ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪ್ರಶಾಂತ್ ತನ್ನ ಆನ್‌ಲೈನ್ ಗೆಳತಿಯನ್ನು ಹುಡುಕಿಕೊಂಡು 2019ರಲ್ಲಿ ಗಡಿ ದಾಟಿ ಪಾಕ್ಗೆ ತೆರಳಿದ್ದರು. ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆ ಪಾಕಿಸ್ತಾನದ ಭೂಪ್ರದೇಶ ಪ್ರವೇಶಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು.
ಪ್ರಶಾಂತ್ ತಂದೆ ಬಾಬುರಾವ್ ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ಅವರನ್ನು ಭೇಟಿಯಾಗಿ ತಮ್ಮ ಮಗನನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ವಿನಂತಿಸಿದರು. ಅವರ ಮನವಿಗೆ ಪೊಲೀಸ್ ಆಯುಕ್ತರು ಸ್ಪಂದಿಸಿ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದರು. ಮಗ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರಿಂದ ಆತನ ಕುಟುಂಬ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದೆ.