ಪಣಜಿ, ಗೋವಾ :ಇತ್ತೀಚೆಗಷ್ಟೇ ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರ ಹಿಡಿದಿದ್ದು, ಪ್ರಮೋದ್ ಸಾವಂತ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಣಜಿ ಬಳಿಯ ಬಾಂಬೋಲಿಮ್‌ನಲ್ಲಿರುವ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು, ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಪ್ರಮಾಣ ವಚನ ಬೋಧಿಸಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಪ್ರಮೋದ್ ಸಾವಂತ್ ಜೊತೆಗೆ ಎಂಟು ಮಂದಿ ಶಾಸಕರಿಗೆ ಸಂಪುಟ ಸಚಿವರಾಗಿ ಪ್ರಮಾಣವಚನ ಬೋಧಿಸಲಾಯಿತು.
ಮೂರು ಬಾರಿ ಶಾಸಕರಾಗಿರುವ ಪ್ರಮೋದ್ ಸಾವಂತ್, ಎರಡನೇ ಬಾರಿಗೆ ಗೋವಾದ ಸಿಎಂ ಆಗಿ ಆಯ್ಕೆಯಾಗಿದ್ದು, ಕೊಂಕಣಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೊದಲು ಸಿಎಂ ಆಗಿದ್ದ ಮನೋಹರ್ ಪರಿಕ್ಕರ್ ನಿಧನದ ನಂತರ ಪ್ರಮೋದ್ ಸಾವಂತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಪ್ರಮೋದ್ ಸಾವಂತ್ ಜೊತೆಗೆ ವಿಶ್ವಜಿತ್ ರಾಣೆ, ಮೌವಿನ್ ಗೊಡಿನ್ಹೊ, ರವಿ ನಾಯ್ಕ್, ನೀಲೇಶ್ ಕಬ್ರಾಲ್, ಸುಭಾಷ್ ಶಿರೋಡ್ಕರ್, ರೋಹನ್ ಖೌಂಟೆ, ಗೋವಿಂದ್ ಗೌಡೆ ಮತ್ತು ಅಟಾನಾಸಿಯೊ ಮೊನ್ಸೆರಾಟ್ಟೆ ಅವರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಶ್ವಜಿತ್ ರಾಣೆ, ಮೌವಿನ್ ಗೊಡಿನ್ಹೊ, ನೀಲೇಶ್ ಕಬ್ರಾಲ್, ಗೋವಿಂದ್ ಗೌಡೆ ಅವರು 2019-22ರ ಸಾವಂತ್ ನೇತೃತ್ವದಲ್ಲಿದ್ದ ಸಂಪುಟದ ಭಾಗವಾಗಿದ್ದರು. ರೋಹನ್ ಖೌಂಟೆ ಅವರು ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ಸಾವಂತ್ ಸರ್ಕಾರಕ್ಕೆ ಇಬ್ಬರು ಸ್ವತಂತ್ರ ಶಾಸಕರು ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯ (ಎಂಜಿಪಿ) ಇಬ್ಬರು ಶಾಸಕರು ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ:ಸತತ 2ನೇ ಬಾರಿ ಸಿಎಂ ಆದ ಯೋಗಿ ಆದಿತ್ಯನಾಥ್: ಬ್ರಿಟಿಷ್ ಸರ್ಕಾರದಿಂದ ಅಭಿನಂದನೆ