ಚೆನ್ನೈ (ತಮಿಳುನಾಡು):ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಆಭರಣ ಸಮೂಹವೊಂದರ ವಿರುದ್ಧ 100 ಕೋಟಿ ರೂಪಾಯಿ ಪೋಂಜಿ ಮತ್ತು ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ನವೆಂಬರ್ 20ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿ 23.70 ಲಕ್ಷ ರೂಪಾಯಿಗಳ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪ್ರಕಾಶ್ ರಾಜ್ ಈ ಜ್ಯುವೆಲ್ಲರ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಮೂಲಗಳ ಪ್ರಕಾರ, ಇಡಿಯು ಪ್ರಕಾಶ್ ರಾಜ್ ಅವರ ಹೇಳಿಕೆಯನ್ನು ದಾಖಲಿಸಲು ಬಯಸಿದ್ದು, ಕೆಲವು ಉದ್ದೇಶಿತ ಪಾವತಿಗಳು ಮತ್ತು ಇತರ ಹಣಕಾಸಿನ ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಲು ಇಡಿ ಮುಂದಾಗಿದೆ. ಕನ್ನಡ, ತೆಲುಗು ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್ ರಾಜ್ ಬಿಜೆಪಿಯ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿ ಸೋತಿದ್ದರು.