ದೆಹಲಿ: ''ನ್ಯಾಯಾಂಗದ ವಿರುದ್ಧವೇ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ ಮಾಡಲು ಹೊರಟಿದೆಯಾ'' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು. ದೆಹಲಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಕಾಂಗ್ರೆಸ್ ದೇಶದ ಸಂವಿಧಾನಬದ್ಧ ಸಂಸ್ಥೆಗಳಿಗೆ ಅವಮಾನ ಮಾಡಿರುವುದಲ್ಲದೇ ಇದೀಗ ದೇಶದ ನ್ಯಾಯಾಂಗವನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನ್ಯಾಯಾಂಗದ ವಿರುದ್ಧ ಕಾಂಗ್ರೆಸ್ ಬೊಟ್ಟು ತೋರಿಸುತ್ತಿದೆ: ''ಮೋದಿ ಎಂಬ ಉಪನಾಮದ ಕುರಿತು ರಾಹುಲ್ ಗಾಂಧಿ ಕೇವಲವಾಗಿ ಮಾತಾಡಿದ್ದರು. ಇಡೀ ಒಬಿಸಿ ಜನಾಂಗಕ್ಕೆ ಅವಮಾನ ಆಗುವ ರೀತಿಯಲ್ಲಿ ರಾಹುಲ್ ಗಾಂಧಿ ಮಾತಾಡಿದ್ದರು. ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ ಕ್ಷಮೆ ಯಾಚಿಸುತ್ತೀರಾ ಎಂದು ಕೇಳಿದರೂ, ರಾಹುಲ್ ಗಾಂಧಿ ಕ್ಷಮೆ ಯಾಚಿಸಲು ಸಂಪೂರ್ಣವಾಗಿ ನಿರಾಕರಿಸಿದ್ದರು. ಮಾನಹಾನಿ ಪ್ರಕರಣದಲ್ಲಿ ಕೋರ್ಟ್ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ. ಆದರೆ, ನ್ಯಾಯಾಂಗದ ಮೇಲೂ ಕಾಂಗ್ರೆಸ್ ಬೊಟ್ಟು ಮಾಡಿ ತೋರಿಸುತ್ತಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?
ಬಿಜೆಪಿ ಪಕ್ಷ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿಲ್ಲ:''ದೇಶವ್ಯಾಪಿ ಪ್ರತಿಭಟನೆ ಎನ್ನುವ ಕಾಂಗ್ರೆಸ್ ಯಾರ ವಿರುದ್ಧ ಅಂತಾ ಜನತೆಯ ಎದುರು ಹೇಳಬೇಕು. ಬಿಜೆಪಿ ಪಕ್ಷ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿಲ್ಲ. ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವ ಬದ್ಧತೆಯನ್ನ ಜನಪ್ರತಿನಿಧಿಗಳು ಹೊಂದಿರಬೇಕು. ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಲಿ. ಅದಕ್ಕೆ ಯಾರು ಅಡ್ಡಿಯಾಗಿಲ್ಲ. ಆದರೆ, ತಮ್ಮ ತಪ್ಪು ಇಟ್ಟುಕೊಂಡು ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆಯನ್ನೇ ಕಾಂಗ್ರೆಸ್ ದೂರುತ್ತಿರುವುದು ಸರಿಯಲ್ಲ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.