ಚೆನ್ನೈ:ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಉತ್ತೇಜಿಸಲು ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಇಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಚೆನ್ನೈನಲ್ಲಿರುವ ಪ್ರಗ್ನಾನಂದ ಅವರ ಮನೆಗೆ ಭೇಟಿ ನೀಡಿದ ವೇಳೆ ಈ ವಿಷಯವನ್ನು ಬಹಿರಂಗ ಪಡಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಸ್ರೋ ಅಧ್ಯಕ್ಷರು, ಪ್ರತಿಯೊಬ್ಬ ಭಾರತೀಯರಂತೆ ನಮಗೂ ಕೂಡ ಪ್ರಗ್ನಾನಂದ ಅವರು ಮಾಡಿರುವ ಸಾಧನೆ ಬಗ್ಗೆ ಹೆಮ್ಮೆಯಿದೆ. ಪ್ರಗ್ಯಾನ್ (ರೋವರ್) ಚಂದ್ರನಲ್ಲಿದ್ದರೆ, ಈ ಪ್ರಗ್ನಾನ್ ಭೂಮಿ ಮೇಲಿದ್ದಾರೆ ಎಂದು ಹೆಮ್ಮೆ ಪಡುತ್ತೇವೆ. ಕಾರಣ ಚಂದ್ರನ ಮೇಲೆ ಇಸ್ರೋ ಮಾಡಿದಂತಹ ಸಾಧನೆಗಳನ್ನು ಭೂಮಿಯ ಮೇಲೆ ಪ್ರಗ್ನಾನಂದ ಮಾಡುತ್ತಿದ್ದಾರೆ ಎಂದರು.
ಚಂದ್ರಯಾನ-3ರ ಭಾಗವಾಗಿ ಕಳುಹಿಸಲಾಗಿದ್ದ ಪ್ರಗ್ಯಾನ್ ರೋವರ್ ಹಲವು ಸಂಶೋಧನೆಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದೆ. ಪ್ರಗ್ನಾನಂದ ಕೂಡ ಈಗಾಗಲೇ ಹಲವಾರು ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿದ್ದಾರೆ. ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ವಿಶ್ವದ ನಂಬರ್ ಒನ್ ಪಟ್ಟ ಅಲಂಕರಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಕೇವಲ ಚೆಸ್ ಮಾತ್ರವಲ್ಲದೇ ಬಾಹ್ಯಾಕಾಶ ಅಭಿಯಾನದಲ್ಲೂ ಪ್ರಗ್ನಾನಂದ ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತವನ್ನು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡಲು ಯುವಕರನ್ನು ಪ್ರೇರೇಪಿಸಲು ಅವರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ. ಯುವ ಪೀಳಿಗೆಯನ್ನು ಪ್ರೇರೇಪಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಯುವಕರಿಗೆ ಉತ್ತೇಜಿಸಲು ಪ್ರಗ್ನಾನಂದ ನಮ್ಮೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ.