ಲಖನೌ: ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಅವರ ನಡೆ ಸಮಾಜವಾದಿ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಶಿವಪಾಲ್ ಯಾದವ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್ನಲ್ಲಿ ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿವಪಾಲ್ ಯಾದವ್ ಬಿಜೆಪಿಯ ದೊಡ್ಡ ದೊಡ್ಡ ನಾಯಕರನ್ನು ಫಾಲೋ ಮಾಡುತ್ತಿರುವುದು ಇದೇ ಮೊದಲು.
ಈ ಹಿನ್ನೆಲೆಯಲ್ಲಿ ಶಿವಪಾಲ್ ಯಾದವ್ ಅವರ ಈ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಮಾರ್ಚ್ 26 ರಂದು ನಡೆದ ಎಸ್ಪಿ ಶಾಸಕಾಂಗ ಪಕ್ಷದ ಸಭೆಗೆ ಶಿವಪಾಲ್ ಯಾದವ್ ಅವರನ್ನು ಆಹ್ವಾನಿಸಿರಲಿಲ್ಲ. ಇದು ಯಾದವ್ ಅವರಲ್ಲಿ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಅವರು ಲಖನೌದಿಂದ ಇಟಾವಾಗೆ ತೆರಳಿದ್ದರು. ಅಲ್ಲಿಂದ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದರು.
ಸಿಎಂ ಯೋಗಿ ಆದಿತ್ಯನಾಥ ಭೇಟಿ ಮಾಡಿದ್ದ ಶಿವಪಾಲ್:ದೆಹಲಿಯಿಂದ ಲಖನೌಗೆ ಮರಳಿದ ನಂತರ ಅವರು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಶಿವಪಾಲ್ ಯಾದವ್ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು.