ಅಶೋಕ್‌ನಗರ(ಪಶ್ಚಿಮ ಬಂಗಾಳ):ಭಾನುವಾರ ಉತ್ತರ 24 ಪರಗಣ ಜಿಲ್ಲೆಯಲ್ಲಿ ತೈಲ ಮತ್ತು ಅನಿಲ ಉತ್ಪಾದನಾ ನಿಕ್ಷೇಪವನ್ನು ರಾಷ್ಟ್ರಕ್ಕೆ ಅರ್ಪಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಶ್ಚಿಮ ಬಂಗಾಳ ಭಾರತದ ತೈಲ ನಕ್ಷೆಯಲ್ಲಿ ಸ್ಥಾನ ಪಡೆಯಲಿದೆ ಎಂದಿದ್ದಾರೆ.
ಕೋಲ್ಕತ್ತಾದಿಂದ 47 ಕಿ.ಮೀ. ದೂರದಲ್ಲಿರುವ ಪೆಟ್ರೋಲಿಯಂ ರಿಸರ್ವ್‌ನಿಂದ ಉತ್ಪಾದನೆ ಪ್ರಾರಂಭವಾಗಿದ್ದು, ಹೊರತೆಗೆದ ತೈಲವನ್ನು ಭಾರತೀಯ ತೈಲ ನಿಗಮದ (ಐಒಸಿ) ಹಲ್ಡಿಯಾ ರಿಫೈನರಿಗೆ ಕಳುಹಿಸಲಾಗಿದೆ.
"ಅಶೋಕ್‌ನಗರ ತೈಲ ಮತ್ತು ಅನಿಲ ರಿಸರ್ವ್, ಉತ್ಪಾದನೆಯನ್ನು ಪ್ರಾರಂಭಿಸುವುದರೊಂದಿಗೆ, ಪಶ್ಚಿಮ ಬಂಗಾಳ ತೈಲ ನಕ್ಷೆಯಲ್ಲಿ ಸ್ಥಾನ ಪಡೆಯುತ್ತದೆ" ಎಂದು ಯೋಜನೆಯನ್ನು ಉದ್ಘಾಟಿಸಿದ ನಂತರ ಹೇಳಿದ್ದಾರೆ.
ಮಹಾನದಿ-ಬಂಗಾಳ-ಅಂಡಮಾನ್ (ಎಂಬಿಎ) ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ಅಶೋಕ್‌ನಗರ ಕ್ಷೇತ್ರವು ವಾಣಿಜ್ಯಿಕವಾಗಿ ಲಾಭದಾಯಕವೆಂದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು ಅಶೋಕ್‌ನಗರ ತೈಲ ನಿಕ್ಷೇಪ ಆವಿಷ್ಕಾರಕ್ಕಾಗಿ 3,381 ಕೋಟಿ ರೂ. ಖರ್ಚು ಮಾಡಿದೆ. ಓಪನ್ ಎಕರೆಜ್ ಲೈಸೆನ್ಸಿಂಗ್ ಪಾಲಿಸಿ (ಒಎಎಲ್‍ಪಿ) ಅಡಿಯಲ್ಲಿ ಕಂಪನಿಯು ಇನ್ನೂ ಎರಡು ಬಾವಿಗಳನ್ನು ಪರಿಶೋಧಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಅಶೋಕ್‌ನಗರ ಮೀಸಲು ಪ್ರದೇಶದಲ್ಲಿ ಪತ್ತೆಯಾದ ಕಚ್ಚಾ ತೈಲವು ಉತ್ತಮ ಗುಣಮಟ್ಟದ್ದಾಗಿದೆ. ತೈಲ ಕ್ಷೇತ್ರದಿಂದ ವಾಣಿಜ್ಯ ಉತ್ಪಾದನೆಯು ಪಶ್ಚಿಮ ಬಂಗಾಳದ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.