ಪುಣೆ (ಮಹಾರಾಷ್ಟ್ರ):ಪಾಕಿಸ್ತಾನದೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪ ಹೊತ್ತಿರುವ ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯ ನಿರ್ದೇಶಕ ಪ್ರದೀಪ್ ಕುರುಲ್ಕರ್ ಬಗ್ಗೆ ಮತ್ತೊಂದು ಹೊಸ ಸಂಗತಿ ಬಹಿರಂಗವಾಗಿದೆ. ಇಬ್ಬರು ಮಹಿಳೆಯರ ಮೇಲೆ ಪ್ರದೀಪ್ ಕುರುಲ್ಕರ್ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ.
ಇದನ್ನೂ ಓದಿ:ಪಾಕಿಸ್ತಾನಿ ಗೂಢಚಾರರೊಂದಿಗೆ ಸಂಪರ್ಕ: ರಾ ಅಧಿಕಾರಿಗಳಿಂದ ಡಿಆರ್ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್ ತನಿಖೆ
ಹನಿಟ್ರ್ಯಾಪ್ ಬಲೆಗೆ ಬಿದ್ದು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ ಮಾಡಿದ ಗಂಭೀರ ಆರೋಪವನ್ನು ಡಿಆರ್ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್ ಎದುರಿಸುತ್ತಿದ್ದಾರೆ. ಈ ಸಂಬಂಧ ಕಳೆದ ಮೇ 3ರಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಸುದೀರ್ಘವಾದ 1,837 ಪುಟಗಳ ಚಾರ್ಜ್ಶೀಟ್ ಅನ್ನು ಜೂನ್ 30ರಂದು ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ಇದೇ ಚಾರ್ಜ್ಶೀಟ್ನಲ್ಲಿ ಇಬ್ಬರು ಮಹಿಳೆಯರಿಗೆ ಪ್ರದೀಪ್ ಕುರುಲ್ಕರ್ ಲೈಂಗಿಕ ಕಿರುಕುಳ ನೀಡಿರುವುದನ್ನು ಉಲ್ಲೇಖಿಸಲಾಗಿದೆ.
ಪ್ರದೀಪ್ ಕುರುಲ್ಕರ್ ಪಾಕಿಸ್ತಾನದೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿರುವುದು ಬೆಳಕಿಗೆ ಬಂದ ನಂತರ ಎಟಿಎಸ್ ತನಿಖೆ ಆರಂಭಿಸಿದೆ. ಇದೇ ತನಿಖೆ ವೇಳೆ ಮುಂಬೈನ ಡಿಆರ್ಡಿಒ ಅತಿಥಿ ಗೃಹದಲ್ಲಿ ಆರು ಮಂದಿ ಮಹಿಳೆಯರನ್ನು ಭೇಟಿಯಾಗಿರುವುದು ಸಿಸಿಟಿವಿ ಕ್ಯಾಮರಾದ ಮೂಲಕ ತನಿಖಾಧಿಕಾರಿಗಳು ಪತ್ತೆ ಹೆಚ್ಚಿದ್ದರು. ಬಳಿಕ ಈ ಮಹಿಳೆಯರ ಬಗ್ಗೆಯೂ ತನಿಖೆ ಆರಂಭಿಸಿದ್ದರು. ಇದರಲ್ಲಿ ಡಿಆರ್ಡಿಒ ಕ್ಯಾಂಪಸ್ನಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ನೀಡುವುದಾಗಿ ಪ್ರದೀಪ್ ಕುರುಲ್ಕರ್ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ಎಟಿಎಸ್ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ನೀಡಲಾಗಿದೆ.