ಪ್ರಯಾಗ್ರಾಜ್(ಉತ್ತರಪ್ರದೇಶ):ದೇಶದಲ್ಲಿ ಒಮಿಕ್ರಾನ್ ಕೇಸ್ಗಳ ಸಂಖ್ಯೆ ಹೆಚ್ಚುತ್ತಿರುವ ಭೀತಿಯಿಂದಾಗಿ ಮುಂಬರುವ ಉತ್ತರಪ್ರದೇಶ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡುವಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಚುನಾವಣೆಗೆ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆ ನಡೆಸುತ್ತಿವೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಪ್ರಚಾರದಿಂದಾಗಿ ಕೊರೊನಾ ಪ್ರಸರಣಗಳ ಸಂಖ್ಯೆ ಅಧಿಕವಾಗಬಹುದು. ಹಾಗಾಗಿ, ರಾಜಕೀಯ ಪಕ್ಷಗಳ ರ್ಯಾಲಿ, ಸಾರ್ವಜನಿಕ ಸಭೆಗಳನ್ನು ತಕ್ಷಣಕ್ಕೆ ಜಾರಿಯಾಗುವಂತೆ ನಿಲ್ಲಿಸಲಾದೀತೆ ಎಂದು ಕೋರ್ಟ್ ಕೇಳಿದೆ.
ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಬೃಹತ್ ರ್ಯಾಲಿಗಳನ್ನು ನಡೆಸಿದಾಗ ಜನಸಂದಣಿ ಹೆಚ್ಚುತ್ತದೆ. ಈ ವೇಳೆ ಕೊರೊನಾ 3ನೇ ಅಲೆ ಬರುವ ಸಾಧ್ಯತೆ ಇರುತ್ತದೆ. 'ಜೀವ ಇದ್ದರೆ ಜಗತ್ತು ತಾನೇ' ಎಂದು ನ್ಯಾಯಮೂರ್ತಿ ಶೇಖರ್ ಯಾದವ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.