ಭೋಪಾಲ್ (ಮಧ್ಯಪ್ರದೇಶ): ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ ಶುರುವಾಗಿದೆ. ಡಿಜಿಟಲ್ ಪಾವತಿ ಕಂಪನಿಯಾದ ಫೋನ್‌ಪೇ (PhonePe) ತನ್ನ ಅನುಮತಿ ಇಲ್ಲದೇ ತನ್ನ ಲಾಂಛನವನ್ನು ಪೋಸ್ಟರ್‌ಗಳಲ್ಲಿ ಬಳಸಿರುವುದನ್ನು ಆಕ್ಷೇಪ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ, ರಾಜ್ಯ ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ನಡುವಿನ ಪೋಸ್ಟರ್ ವಾರ್ ತೀವ್ರಗೊಂಡಿದೆ. ಕಳೆದ ವಾರದಿಂದ ಇಬ್ಬರು ನಾಯಕರ ಫೋಟೋಗಳನ್ನು ಬಳಸಿ ಕ್ಯೂಆರ್ ಕೋಡ್‌ಗಳನ್ನು ಒಳಗೊಂಡ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಅಂಟಿಸಲಾಗಿದೆ. ಮೊದಲಿಗೆ ಭೋಪಾಲ್‌ನ ಮಾರುಕಟ್ಟೆ ಆವರಣದಲ್ಲಿ ಕಮಲ್ ನಾಥ್ ಅವರ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಅದರಲ್ಲಿ ಮಧ್ಯಪ್ರದೇಶದಲ್ಲಿ ಈ ಹಿಂದೆ 15 ತಿಂಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಇದರ ಮರುದಿನ ಬೆಳಗ್ಗೆಯೇ ಶಿವರಾಜ್ ಸಿಂಗ್ ಅವರ ಇದೇ ರೀತಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
ಈ ಪೋಸ್ಟರ್‌ಗಳು ಕ್ಯೂಆರ್ ಕೋಡ್ ಮತ್ತು ಶಿವರಾಜ್ ಸಿಂಗ್ ಅವರ ಚಿತ್ರ ಬಳಸಿ, ಶೇ.50ರಷ್ಟು ಕಮಿಷನ್ ಕೊಟ್ಟು ಕೆಲಸ ಮಾಡಿಸಿಕೊಳ್ಳಿ ಎಂದು ಬರೆಯಲಾಗಿದೆ. ಇದರ ಜೊತೆಗೆ ಪ್ರಮುಖ ಆನ್‌ಲೈನ್ ಪಾವತಿ ಅಪ್ಲಿಕೇಶನ್ ಆಗಿರುವ ಫೋನ್‌ಪೇ (PhonePe) ಹೆಸರು ಹಾಗೂ ಅದರ ಲೋಗೋವನ್ನು ಪೋಸ್ಟರ್‌ಗಳಲ್ಲಿ ಬಳಕೆ ಮಾಡಲಾಗಿದೆ. ಇದಕ್ಕೆ ಫೋನ್‌ಪೇ ಕಂಪನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತನ್ನ ಬ್ರ್ಯಾಂಡ್ ಲೋಗೋವನ್ನು ರಾಜಕೀಯ ಅಥವಾ ರಾಜಕೀಯವಲ್ಲದ ಯಾವುದೇ ವಿಷಯಕ್ಕಾಗಿ ಮೂರನೇ ವ್ಯಕ್ತಿ ಅನಧಿಕೃತವಾಗಿ ಬಳಸುವುದನ್ನು ಖಂಡಿಸಿದೆ.
''ಫೋನ್‌ಪೇ ಲೋಗೋ ನಮ್ಮ ಕಂಪನಿಯ ನೋಂದಾಯಿತ ಟ್ರೇಡ್‌ಮಾರ್ಕ್ ಆಗಿದೆ. ಫೋನ್‌ಪೇನ ಬೌದ್ಧಿಕ ಆಸ್ತಿ ಹಕ್ಕುಗಳ ಯಾವುದೇ ಅನಧಿಕೃತ ಬಳಕೆಯು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. ನಮ್ಮ ಬ್ರ್ಯಾಂಡ್ ಲೋಗೋ ಮತ್ತು ಬಣ್ಣವನ್ನು ಒಳಗೊಂಡಿರುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕಲು ನಾವು ಮಧ್ಯಪ್ರದೇಶದ ಕಾಂಗ್ರೆಸ್ಗೆ ವಿನಂತಿಸುತ್ತೇವೆ. ನಾವು ಯಾವುದೇ ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ'' ಎಂದು ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.
ಮತ್ತೊಂದೆಡೆ, ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಫೋನ್‌ಪೇ ದೂರು ನೀಡಿದರೆ ಈ ವಿಷಯದ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ, ಸಿಎಂ ಶಿವರಾಜ್ ಸಿಂಗ್ ಅವರ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದಾರೆ ಎಂದೂ ದೂರಿದ್ದಾರೆ. ಕಾಂಗ್ರೆಸ್ ತನ್ನ ಆಂತರಿಕ ಸಂಘರ್ಷವನ್ನು ಮರೆ ಮಾಚಲು ಕೊಳಕು ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಛಿಂದ್ವಾರಾ, ಗ್ವಾಲಿಯರ್, ನರಸಿಂಗ್‌ಪುರ, ಭೋಪಾಲ್ ಮತ್ತು ಇತರ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಹಾಕುತ್ತಿರುವುದು ಕಂಡುಬಂದಿದೆ. ಈ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇದೇ ವೇಳೆ, ಗ್ವಾಲಿಯರ್‌ನಲ್ಲಿ ಶಿವರಾಜ್ ಸಿಂಗ್ ಅವರ ಆಕ್ಷೇಪಾರ್ಹ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೋಸ್ಟರ್‌ಗಳ ಬಗ್ಗೆ ದೂರಿನ ಮೇರೆಗೆ ಪಡಾವೊ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಾಂಡೆಲ್ ತಿಳಿಸಿದ್ದಾರೆ.
ಇದನ್ನೂ ಓದಿ:MP Elections: ಮಧ್ಯಪ್ರದೇಶದಲ್ಲೂ ಪೇಸಿಎಂ ಪೋಸ್ಟರ್ ವಾರ್; ರಂಗೇರಿದ ರಾಜಕೀಯ