ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ನಡೆಯುವ ನಾಲ್ಕು ದಿನಗಳ ದುರ್ಗಾ ಪೂಜೆ ಇಂದಿಗೆ ಕೊನೆಗೊಳ್ಳುತ್ತಿದ್ದು, ವಿವಿಧ ಬಗೆಯ ಹೂ, ಬಣ್ಣಗಳಿಂದ ದುರ್ಗಾ ದೇವಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಕೋವಿಡ್ ನಿಯಮಗಳನ್ನು ಪಾಲಿಸದೇ ಕೋಲ್ಕತ್ತಾದ ಬೀದಿಗಳಲ್ಲಿ ಜನ ಸೇರಿರುವುದು ಮತ್ತೊಂದು ಕೊರೊನಾ ಅಲೆಗೆ ಕಾರಣವಾಗುತ್ತಾ ಎಂಬ ಪ್ರಶ್ನೆಗಳು ಎದುರಾಗಿವೆ. ಮತ್ತೊಂದೆಡೆ ಕೊರೊನಾ ಪ್ರೋಟೋಕಾಲ್‌ಗಳನ್ನು ಸರಿಯಾಗಿ ನಿರ್ವಹಿಸದಿರುವ ಆರೋಪ ಆಡಳಿತಾಧಿಕಾರಿಗಳ ವಿರುದ್ಧ ಕೇಳಿ ಬಂದಿದೆ.
ಸ್ವಯಂ ಪ್ರೇರಿತವಾಗಿ ಜನರೇ ಸೋಂಕು ಹರಡದಂತೆ ನಿಯಮಗಳನ್ನು ಪಾಲಿಸಬೇಕಿದೆ. ಆದರೆ, ಪೂಜಾ ಪೆಂಡಾಲ್‌ಗಳಲ್ಲಿ ಹೆಚ್ಚಿನ ಜನ ಸೇರಿರುವುದು ಸೋಂಕಿತರು ಹೆಚ್ಚುವ ಆತಂಕಕ್ಕೆ ಕಾರಣವಾಗಿದೆ. ಮುಂದಿನ ವಾರದೊಳಗೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಗೊತ್ತಾಗಲಿದೆ ಎಂದು ಕೋಲ್ಕತ್ತಾದಲ್ಲಿನ ವೈದ್ಯರು ತಿಳಿಸಿದ್ದಾರೆ.
ಸಚಿವರು ಸೇರಿದಂತೆ ರಾಜಕಾರಣಿಗಳು ಪೆಂಡಾಲ್‌ಗಳಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವ ರೀತಿ ಸ್ವೀಕಾರಾರ್ಹವಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ವೈದ್ಯರೊಬ್ಬರು ಹೇಳಿದ್ದಾರೆ.
ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿರುವುದುರಿಂದ ಮತ್ತೆ ಕೋವಿಡ್ ಪ್ರಕರಣ ಹೆಚ್ಚಾಗದರೆ ಮತ್ತೆ ಅದೇ ಸಂಕಷ್ಟಕ್ಕೆ ಇಲ್ಲಿನ ಜನರು ಸಿಲುಕುವ ಸಾಧ್ಯತೆ ಇದೆ.