ನವದೆಹಲಿ:ದೇಶದ ಅತ್ಯಂತ ಹಳೆಯ ಸೇವೆಯಾದ ಅಂಚೆ ಕಚೇರಿಯನ್ನು ಖಾಸಗೀಕರಣ ಮಾಡುವುದಿಲ್ಲ. ಬದಲಿಗೆ ದೇಶಾದ್ಯಂತ ಸುಮಾರು 5 ಸಾವಿರ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 5746 ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
125 ವರ್ಷಗಳ ಹಿಂದಿನ (1898) ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಗೊಳಿಸಿ, ಹೊಸದಾದ ವ್ಯವಸ್ಥೆಯನ್ನು ಜಾರಿಗೆ ತರುವ ಅಂಚೆ ಕಚೇರಿ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ. ಈ ವೇಳೆ ನಡೆದ ಚರ್ಚೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಅಂಚೆ ಕಚೇರಿಗಳ ಸೇವೆಗಳನ್ನು ವಿಸ್ತರಿಸುವುದು ಮಸೂದೆಯ ಗುರಿಯಾಗಿದೆ. ಸೇವಾ ನಿಯಮಗಳು ಬದಲಾದ ಕಾರಣ, 1898 ರಲ್ಲಿ ಜಾರಿಗೆ ತರಲಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಅಂಚೆ ಸೇವೆಗಳು ವಿಸ್ತರಣೆ:ಅಂಚೆ ಸೇವೆಗಳು, ಕಚೇರಿಗಳು ಮತ್ತು ಪೋಸ್ಟ್ಮ್ಯಾನ್ಗಳು ಕೇವಲ ಅಂಚೆಗಳಲ್ಲಿ ಬಂದ ಪತ್ರಗಳನ್ನು ವಿತರಣೆ ಮಾಡುವ ಕಾಲ ಈಗಿಲ್ಲ. ಕಳೆದ ಒಂಬತ್ತೂವರೆ ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಅಂಚೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಇದರ ಸೇವೆಯನ್ನು ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವಾರು ಹೊಸ ಅಂಚೆ ಕಚೇರಿಗಳನ್ನು ಸ್ಥಾಪಿಸಿದೆ ಎಂದು ಅವರು ಮಾಹಿತಿ ನೀಡಿದರು.