ನವದೆಹಲಿ: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಲಾಕ್ಡೌನ್ ತೆರವುಗೊಳಿಸಿದ ರಾಷ್ಟ್ರ ರಾಜಧಾನಿ ದೆಹಲಿಗೆ ಈಗ ಮತ್ತೊಂದು ಗಂಭೀರವಾದ ಸಮಸ್ಯೆ ಎದುರಾಗಿದೆ. ಕೋವಿಡ್ನಿಂದ ಗುಣಮುಖರಾದ ಬಳಿಕ ಜನರು ಅನಾರೋಗ್ಯಕ್ಕೆ ತುತ್ತಾಗಿ ಅಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಕೊರೊನಾ ಮೊದಲನೇ ಅಲೆಯ ಸಂದರ್ಭ ವೈರಸ್ನಿಂದ ಚೇತರಿಸಿಕೊಂಡಿದ್ದವರಿಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆದರೆ ಅದು ಸಣ್ಣ ಪ್ರಮಾಣದಲ್ಲಿತ್ತು. ಸೌಮ್ಯ ಜ್ವರ, ಸುಸ್ತು-ಆಯಾಸದಂತಹ ಲಕ್ಷಣಗಳು ಕಂಡು ಬರುತ್ತಿತ್ತು. ಅದರಲ್ಲಿಯೂ 60 ವರ್ಷ ಮೇಲ್ಪಟ್ಟವರು ಅಥವಾ ಶ್ವಾಸಕೋಶ ಸಮಸ್ಯೆ ಇದ್ದವರಿಗೆ ಹೀಗೆ ಆಗುತ್ತಿತ್ತು.
ಆದರೆ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಗುಣಮುಖರಾದವರಲ್ಲಿ, ಅದರಲ್ಲಿಯೂ ಮಧ್ಯ ವಯಸ್ಸಿನ ಮತ್ತು ಯುವಕರಲ್ಲಿ ಕೆಲ ವಾರಗಳ ಬಳಿಕ ದೇಹದಲ್ಲಿ ಆಮ್ಲಜನಕ ಕಡಿಮೆಯಾಗುತ್ತಿದ್ದು, ಉಸಿರಾಟ ಸಮಸ್ಯೆ ಎದುರಾಗುತ್ತಿದೆ. ತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಇಂತಹ 25-30 ರೋಗಿಗಳು ಬರುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.