ಈ ತಿಂಗಳ ಕೊನೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಭಾರತ ಮತ್ತು ಪಾಕಿಸ್ತಾನದ ಇಂಡಸ್ ಕಮಿಷನರ್‌ಗಳ ಭೇಟಿಗೂ ಮುನ್ನ, ಸಿಂಧೂ ಜಲ ಒಪ್ಪಂದದ ಬಗ್ಗೆ ವಿವರ, ಅದರ ಪರಿಣಾಮ ಮತ್ತು ನಿರೀಕ್ಷೆ ಬಗ್ಗೆ ಭಾರತದ ಇಂಡಸ್ ಕಮಿಷನರ್ ಪ್ರದೀಪ್ ಕುಮಾರ್ ಸಕ್ಸೇನಾ ಜೊತೆಗೆ ಈಟಿವಿ ಭಾರತ್ ಮಾತುಕತೆ ನಡೆಸಿದೆ.
ಸಂದರ್ಶನದ ಮುಖ್ಯಾಂಶಗಳು :
ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಸಂಕ್ಷಿಪ್ತ ವಿವರ ನೀಡಿ :ಸಿಂಧೂ ನದಿ ನೀರು ಒಪ್ಪಂದಕ್ಕೆ 1960 ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದ್ದವು. ಈ ಒಪ್ಪಂದದ ನಿಯಮಗಳ ಪ್ರಕಾರ ಎಲ್ಲ ಪೂರ್ವ ಭಾಗದ ನದಿಗಳಾದ ಸಟ್ಲೆಜ್, ಬಿಯಸ್ ಮತ್ತು ರಾವಿಯ ಸರಾಸರಿ 33 ಮಿಲಿಯನ್ ಎಕರೆ ಅಡಿ (ಎಂಎಎಫ್) ನೀರನ್ನು ಭಾರತದ ಅನಿರ್ಬಂಧಿತ ಬಳಕೆಗಾಗಿ ನಿಯೋಜಿಸಲಾಗಿದೆ.
ಅಷ್ಟೇ ಅಲ್ಲ, ಪಶ್ಚಿಮ ನದಿಗಳಾದ ಸಿಂಧೂ, ಝೇಲಂ ಮತ್ತು ಚೆನಾಬ್ ನದಿಗಳ ಸರಾಸರಿ 135 ಎಂಎಎಫ್ ವಾರ್ಷಿಕ ಹರಿವನ್ನು ಬಿಡುವುದಕ್ಕೆ ಭಾರತ ಬದ್ಧವಾಗಿದೆ. ಒಪ್ಪಂದದಲ್ಲಿ ಹೇಳಿದಂತೆ ದೇಶೀಯ ಬಳಕೆ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಈ ನೀರನ್ನು ಬಳಸುವಂತಿಲ್ಲ ಎಂಬ ಷರತ್ತಿಗೆ ಒಳಪಟ್ಟಿದೆ. ಜಲವಿದ್ಯುತ್ ಉತ್ಪಾದನೆಗೆ ಅನಿರ್ಬಂಧಿತ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ. ವಿನ್ಯಾಸ ಮತ್ತು ಕಾರ್ಯಾಚರಣೆಗೆ ನಿರ್ದಿಷ್ಟ ಮಾನದಂಡವನ್ನು ನಿಗದಿಸಲಾಗಿದೆ.
ಚೆನಾಬ್ ನದಿಯಲ್ಲಿ ಭಾರತದ ಜಲವಿದ್ಯುತ್ ಪ್ರಾಜೆಕ್ಟ್‌ನ ಬಗ್ಗೆ ಪಾಕ್ ಕಳವಳ ವ್ಯಕ್ತಪಡಿಸಿದೆ. ಇದರ ಬಗ್ಗೆ ಏನಂತೀರಿ? :ಒಪ್ಪಂದದ ಪ್ರಕಾರ ಭಾರತದ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸಲು ಭಾರತ ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ಭಾರತ ಶ್ರಮಿಸುತ್ತಿದೆ. ಚರ್ಚೆಯ ಮೂಲಕ ಈ ವಿಷಯವನ್ನು ಪರಿಹರಿಸಿಕೊಳ್ಳುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಸಭೆಯ ವೇಳೆ, ಚೆನಾಬ್ ನದಿಯಲ್ಲಿ ಭಾರತದ ಜಲವಿದ್ಯುತ್ ಯೋಜನೆಗಳ ವಿನ್ಯಾಸಕ್ಕೆ ಪಾಕಿಸ್ತಾನದ ಆಕ್ಷೇಪಗಳ ಕುರಿತು ಚರ್ಚೆ ನಡೆಸಬಹುದು. ನಿರಂತರ ಚರ್ಚೆಗಳ ಮೂಲಕ ಈ ವಿಚಾರಗಳ ಕುರಿತು ನಿರ್ಣಯಕ್ಕೆ ಬರಬಹುದು ಎಂದು ಭಾವಿಸಲಾಗಿದೆ.
ಭಾರತ-ಪಾಕ್‌ನ ಸಂಬಂಧಗಳಿಗೆ ಸಿಂಧೂ ನದಿ ನೀರು ಒಪ್ಪಂದ ಎಷ್ಟು ಪ್ರಮುಖ?:ಈ ಒಪ್ಪಂದವು ಸಿಂಧೂ ನದಿ ನೀರಿನ ಬಳಕೆಯ ಕುರಿತು ಎರಡೂ ದೇಶಗಳಿಗೆ ಮಿತಿಯನ್ನು ನಿಗದಿಪಡಿಸುತ್ತದೆ. ಈ ಕುರಿತು ಇರುವ ಸಮಸ್ಯೆಯನ್ನು ವ್ಯವಸ್ಥಿತವಾಗಿ ವ್ಯಾಖ್ಯಾನಿಸಿದ ವಿಧಾನದ ಮೂಲಕ ಪರಿಹಾರವನ್ನೂ ಇದು ಮಾಡುತ್ತದೆ.
ಭಾರತ-ಪಾಕ್‌ನ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಮಧ್ಯೆಯೇ ಮುಂಬರುವ ಭೇಟಿ ಎಷ್ಟು ಮುಖ್ಯ?:ಒಪ್ಪಂದದ ಅಡಿ ಭಾರತ ಅಥವಾ ಪಾಕಿಸ್ತಾನದಲ್ಲಿ ಕನಿಷ್ಠ ವರ್ಷಕ್ಕೊಮ್ಮೆ ಎರಡೂ ಕಮಿಷನರ್‌ಗಳು ಭೇಟಿ ಮಾಡುವುದು ಕಡ್ಡಾಯ. ಕಳೆದ ವರ್ಷ 2020 ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಭೇಟಿಯನ್ನು ನಿಗದಿಪಡಿಸಲಾಗಿತ್ತು.
ಆದರೆ, ಸಾಂಕ್ರಾಮಿಕ ರೋಗದ ಹಿನ್ನೆಲೆ ಎರಡೂ ದೇಶಗಳ ಸಮ್ಮತಿಯ ಮೇರೆಗೆ ಭೇಟಿ ರದ್ದು ಮಾಡಲಾಗಿತ್ತು. ಇದು ಒಪ್ಪಂದ ನಡೆದ ನಂತರ ರದ್ದಾದ ಮೊದಲ ಭೇಟಿಯಾಗಿದೆ. ಸನ್ನಿವೇಶ ಸುಧಾರಿಸಿದ ಹಿನ್ನೆಲೆ, ಕೋವಿಡ್-19 ಸಂಬಂಧಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಈ ಭೇಟಿ ನಡೆಸಲಾಗುತ್ತಿದೆ.
370ನೇ ವಿಧಿ ರದ್ದಾದ ನಂತರ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ. ಯಾವ ಹೊಸ ಸಂಗತಿ ನಿರೀಕ್ಷಿಸಬಹುದು? ಸಿಂಧೂ ನದಿ ಒಪ್ಪಂದದಲ್ಲಿ ಭಾರತದ ಪಾತ್ರ ಯಾವುದು? :ವಾರ್ಷಿಕ ಸಭೆಯು ಕಡ್ಡಾಯವಾಗಿದೆ ಮತ್ತು ಭೇಟಿಯ ಅಜೆಂಡಾವನ್ನು ಸಭೆಗೂ ಮುನ್ನ ಎರಡೂ ಕಮಿಷನರ್‌ಗಳು ನಿರ್ಧರಿಸುತ್ತಾರೆ. ಈ ಒಪ್ಪಂದಕ್ಕೆ ಭಾರತವೂ ಸಹಿ ಹಾಕಿದೆ.