ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶ ಖಾತೆ ಹಂಚಿಕೆ: ಮಾಜಿ ಸಿಎಂಗಳ ಕುಟುಂಬಕ್ಕೆ ಮಹತ್ವದ ಸಚಿವ ಸ್ಥಾನ

ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದು 2 ತಿಂಗಳ ಬಳಿಕ ಸಿಎಂ ಸುಖವಿಂದರ್ ಸಿಂಗ್ ಸುಖು ಅವರು ಖಾತೆ ಹಂಚಿದ್ದಾರೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರನಿಗೆ ಪ್ರಬಲ ಖಾತೆಯಾದ ಪಿಡಬ್ಲ್ಯೂಡಿ ಇಲಾಖೆಯ ಹೊಣೆ ನೀಡಲಾಗಿದೆ.

himachal-pradesh
ಹಿಮಾಚಲಪ್ರದೇಶ ಸಚಿವರಿಗೆ ಖಾತೆ ಹಂಚಿಕೆ

By

Published : Jan 12, 2023, 10:14 AM IST

ಶಿಮ್ಲಾ:ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ ಶಾಕ್​ ನೀಡಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಪಕ್ಷದ ಸಚಿವ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರಿಗೆ ಲೋಕೋಪಯೋಗಿ, ಯುವಜನ ಮತ್ತು ಕ್ರೀಡಾ ಇಲಾಖೆಗಳ ಉಸ್ತುವಾರಿ ನೀಡಲಾಗಿದೆ. ಸಂಪುಟದಲ್ಲಿ ವಿಕ್ರಮಾದಿತ್ಯ ಸಿಂಗ್ ಕಿರಿಯ ಸಚಿವರಾಗಿದ್ದಾರೆ.

ಮಾಜಿ ಸಿಎಂ ಪುತ್ರನಿಗೆ ಪ್ರಬಲ PWD ಖಾತೆ:ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ, ಸಂಸದೆ ಪ್ರತಿಭಾ ಸಿಂಗ್​ ಅವರು ಮುಖ್ಯಮಂತ್ರಿ ರೇಸ್​ನಲ್ಲಿದ್ದರು. ಆದರೆ, ಹೈಕಮಾಂಡ್​ ಅವರ ಬದಲಾಗಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿತ್ತು. ಹೀಗಾಗಿ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರಿಗೆ ಸಂಪುಟದ ಪ್ರಬಲ ಖಾತೆಯಾದ ಪಿಡಬ್ಲ್ಯೂಡಿ ಕೊಡಲಾಗಿದೆ. ಮುಖ್ಯಮಂತ್ರಿಗಳ ಕೋರಿಕೆಯ ಮೇರೆಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಧನಿ ರಾಮ್ ಶಾಂಡಿಲ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗಳ ಉಸ್ತುವಾರಿ ನೀಡಲಾಗಿದೆ. ಇವರು ಸಂಪುಟದ ಹಿರಿಯ ಸಚಿವರು. ಶಾಂಡಿಲ್ ಅವರು 2012 ರಿಂದ 2017 ರವರೆಗೆ ಗುಡ್ಡಗಾಡು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು.

ಮತ್ತೋರ್ವ ಮಾಜಿ ಸಿಎಂ ಮೊಮ್ಮಗನಿಗೆ ಉನ್ನತ ಶಿಕ್ಷಣ: ಕಾಂಗ್ರಾ ಜಿಲ್ಲೆಯಿಂದ ಪ್ರತಿನಿಧಿಸುವ ಚಂದರ್​ಕುಮಾರ್ ಅವರಿಗೆ ಕೃಷಿ ಮತ್ತು ಪಶುಸಂಗೋಪನೆ ಇಲಾಖೆಗಳು ದೊರೆತಿದ್ದರೆ, ಹರ್ಷವರ್ಧನ್ ಚೌಹಾಣ್ ಅವರಿಗೆ ಕೈಗಾರಿಕೆಗಳು, ಸಂಸದೀಯ ವ್ಯವಹಾರಗಳು ಮತ್ತು ಆಯುಷ್ ಖಾತೆಗಳನ್ನು ನೀಡಲಾಗಿದೆ. ಕುಮಾರ್ ಮತ್ತು ಚೌಹಾಣ್ ಇಬ್ಬರೂ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜಗತ್ ಸಿಂಗ್ ನೇಗಿ ಅವರಿಗೆ ಕಂದಾಯ, ತೋಟಗಾರಿಕೆ ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆಗಳನ್ನು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಠಾಕೂರ್ ರಾಮ್​ಲಾಲ್ ಅವರ ಮೊಮ್ಮಗ ರೋಹಿತ್ ಠಾಕೂರ್ ಅವರಿಗೆ ಉನ್ನತ, ಪ್ರಾಥಮಿಕ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಮತ್ತು ಕೈಗಾರಿಕಾ ತರಬೇತಿ ಖಾತೆಗಳನ್ನು ನೀಡಲಾಗಿದೆ. ಹಂಚಿಕೆಯಾಗದೇ ಉಳಿದ ಹಣಕಾಸು, ಸಾಮಾನ್ಯ ಆಡಳಿತ, ಗೃಹ, ಯೋಜನೆ, ಸಿಬ್ಬಂದಿ ಮತ್ತು ಇತರ ಖಾತೆಗಳನ್ನು ಮುಖ್ಯಮಂತ್ರಿ ಸುಖು ಅವರು ಉಳಿಸಿಕೊಂಡಿದ್ದಾರೆ. ಜಲಶಕ್ತಿ, ಸಾರಿಗೆ, ಕಲೆ ಮತ್ತು ಸಂಸ್ಕೃತಿ ಇಲಾಖೆಗಳು ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರಿಗೆ ಸಿಕ್ಕಿದೆ.

ಯಾವ ಪ್ರದೇಶಕ್ಕೆ ಹೆಚ್ಚು ಪ್ರಾತಿನಿಧ್ಯ?: 7 ಶಾಸಕರನ್ನು ಹೊಂದಿರುವ ಶಿಮ್ಲಾ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಲಾಗಿದೆ. ಈ ಸಂಪುಟದಲ್ಲಿ ಈ ಜಿಲ್ಲೆ ಸಿಂಹಪಾಲು ಪಡೆದಿದೆ. ಬಿಲಾಸ್‌ಪುರ, ಮಂಡಿ, ಕುಲು ಮತ್ತು ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ. 10 ಶಾಸಕರನ್ನು ಹೊಂದಿರುವ ಕಾಂಗ್ರಾಗೆ ಕೇವಲ ಒಂದು ಸಂಪುಟ ದರ್ಜೆ ಸ್ಥಾನ ಸಿಕ್ಕಿದೆ. ವಿಧಾನಸಭೆ ಸ್ಪೀಕರ್ ಕುಲದೀಪ್ ಪಠಾನಿಯಾ ಚಂಬಾ ಜಿಲ್ಲೆಯ ಭಾಟಿಯತ್ ಮೂಲದವರಾಗಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ ಸಚಿವರ ಸಂಖ್ಯೆ 12 ಮೀರಬಾರದು ಎಂಬ ನಿಯಮದಿಂದಾಗಿ ಉಪಸಭಾಪತಿ ಹುದ್ದೆಯೂ ಸೇರಿದಂತೆ ಮೂರು ಸ್ಥಾನಗಳನ್ನು ಖಾಲಿ ಬಿಡಲಾಗಿದೆ. ಕಳೆದ ವರ್ಷದ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಮಣಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಗಾದಿಗೆ ಮೂವರು ನಾಯಕರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಪರಿಸ್ಥಿತಿಯ ಗಂಭೀರತೆ ಅರಿತು ಮಧ್ಯಪ್ರವೇಶಿಸಿದ್ದ ಹೈಕಮಾಂಡ್​ ಸುಖವಿಂದರ್ ಸಿಂಗ್ ಸುಖು ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿತ್ತು.

ಇದನ್ನೂ ಓದಿ:ಮನುಸ್ಮೃತಿ'ಯಂತೆ 'ರಾಮಚರಿತಮಾನಸ'ವನ್ನೂ ಸುಟ್ಟು ಹಾಕಬೇಕು: ಬಿಹಾರ​ ಶಿಕ್ಷಣ ಸಚಿವ

ABOUT THE AUTHOR

...view details