ಪಾಟ್ನಾ (ಬಿಹಾರ) :ರೈಲ್ವೆ ನಿಲ್ದಾಣವೊಂದರ ಜಾಹೀರಾತು ಸ್ಕ್ರೀನ್ ಮೇಲೆ ಪೋರ್ನ್(ಅಶ್ಲೀಲ) ವಿಡಿಯೋ ಪ್ರಸಾರವಾದ ಘಟನೆ ಭಾನುವಾರ ನಡೆದಿದೆ. ಹೌದು, ಬಿಹಾರದ ರಾಜಧಾನಿ ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿರುವ ಜಾಹೀರಾತು ಸ್ಕ್ರೀನ್ ಮೇಲೆ ವಿಡಿಯೋ ಪ್ರಸಾರವಾಗಿತ್ತು. ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿ, ಜಾಹೀರಾತಿನ ಪರದೆಯ ಮೇಲೆ ವಿಡಿಯೋ ಪ್ಲೇ ಮಾಡಿದ್ದಾರೆ. ಇದರಿಂದ ನಿಲ್ದಾಣದಲ್ಲಿದ್ದ ರೈಲ್ವೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾನುವಾರ ರಾತ್ರಿ 9.30ರ ಸುಮಾರಿಗೆ ಜಾಹೀರಾತು ಫಲಕದ ಪರದೆ ಮೇಲೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೊ ಪ್ಲೇ ಆಗಿದೆ. ಅಸಭ್ಯ ವಿಡಿಯೋ ದಾರಿಹೋಕರನ್ನು ವಿಚಲಿತರನ್ನಾಗಿಸಿತ್ತು. ಜೊತೆಗೆ ಇಡೀ ಪಾಟ್ನಾ ಜಂಕ್ಷನ್ ಕೆಲಹೊತ್ತು ಅಲ್ಲೋಲ ಕಲ್ಲೋಲವಾದಂತೆ ಭಾಸವಾಗಿತ್ತು. ಪ್ರಯಾಣಿಕರು ವಿಶೇಷವಾಗಿ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುವ ವೇಳೆ, ಮುಖ್ಯ ರಸ್ತೆಗೆ ಎದುರಾಗಿರುವ ಈ ಬೋರ್ಡ್‌ನ ಡಿಸ್ಪ್ಲೇ ಪರದೆಯಿಂದ ಮುಖ ತಿರುಗಿಸಿಕೊಂಡು ಹೋಗುತ್ತಿದುದು ಕಂಡುಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಜುಗರದ ಸನ್ನಿವೇಶ:ರಾತ್ರಿ 9.30ರ ನಂತರ ನಗ್ನ ವಿಡಿಯೋ ಪ್ರಸಾರವಾಗುತ್ತಿದ್ದರಿಂದ ಇಲ್ಲಿ ನೆರೆದಿದ್ದವರು ಮುಜುಗರ ಎದುರಿಸಬೇಕಾಯಿತು ಎಂದು ನಿಲ್ದಾಣದಲ್ಲಿದ್ದ ಜನರು ಹೇಳಿದ್ದಾರೆ. ಘಟನೆಯ ಬಗ್ಗೆ ನಿಲ್ದಾಣದ ಆಡಳಿತ ಮಂಡಳಿಗೆ ತಿಳಿದ ತಕ್ಷಣವೇ ಡಿಸ್ಪ್ಲೇ ಪರದೆಯನ್ನು ಆಫ್ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಕುರಿತು ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿರುವ ಆರ್‌ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.