ಲಖನೌ: ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ.
ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್. ಮಿತ್ತಲ್, ಜನರ ಅಭಿಪ್ರಾಯ ಕೋರಿ ಕರಡು ಮಸೂದೆಯನ್ನು ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಲಹೆ ನೀಡಲು ಜುಲೈ 19, 2021 ರವರೆಗೆ ಅವಕಾಶವಿರುತ್ತದೆ.
ಈ ಕಾಯ್ದೆಯನುಸಾರ ಇನ್ಮುಂದೆ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಸರ್ಕಾರಿ ಯೋಜನೆಗಳು ಸಿಗುವುದಿಲ್ಲ, ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅವಕಾಶವಿರುವುದಿಲ್ಲ. ಎರಡು ಮಕ್ಕಳನ್ನು ಪಡೆಯುವ ಪೋಷಕರು ಮನೆ ಖರೀದಿಸಲು ಸಬ್ಸಿಡಿ, ಶುಲ್ಕಗಳ ಮೇಲಿನ ರಿಯಾಯಿತಿ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಇಪಿಎಫ್‌ನಲ್ಲಿ 3% ಹೆಚ್ಚಳ ಮುಂತಾದ ಪ್ರೋತ್ಸಾಹಗಳಿಗೆ ಅರ್ಹರಾಗಿರುತ್ತಾರೆ. ಕೇವಲ ಒಂದು ಮಗು ಹೊಂದುವ ದಂಪತಿಗೆ ಈ ಯೋಜನೆಗಳ ಜತೆ ಹಲವು ವಿಶೇಷ ಪ್ರೋತ್ಸಾಹಗಳನ್ನೂ ನೀಡಲಾಗುವುದು ಎಂದು ಮಿತ್ತಲ್ ಹೇಳಿದ್ದಾರೆ. ಆಗಸ್ಟ್ ವೇಳೆಗೆ ಜನಸಂಖ್ಯಾ ನೀತಿ ಮಸೂದೆ ಜಾರಿಗೆ ಬರಲಿದೆ ಎಂದು ಮಿತ್ತಲ್ ಸ್ಪಷ್ಟಪಡಿಸಿದ್ದಾರೆ.