ನವದೆಹಲಿ:ಇನ್ನೊಂದು ವರ್ಷದಲ್ಲಿ ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ರಾಷ್ಟ್ರವಾಗಲಿದೆ ಎಂದು ವರದಿಯೊಂದು ಅಂದಾಜಿಸಿದೆ. ಇದು ಆತಂಕ ಉಂಟು ಮಾಡಿದ್ದು, ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂಬ ಕೂಗು ಪಕ್ಷಾತೀತವಾಗಿ ಕೇಳಿಬಂದಿದೆ. ಆದರೆ, ಈ ಬಗ್ಗೆ ಕಾನೂನು ತರುವ ಪ್ರಯತ್ನಗಳು ಸಾಕಾರವಾಗುವ ಲಕ್ಷಣ ಮಾತ್ರ ತೀರಾ ಕಡಿಮೆ.
ಸದ್ಯ ಸಂಸತ್ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಇಂದು ಲೋಕಸಭೆಯಲ್ಲಿ 'ಜನಸಂಖ್ಯೆ ನಿಯಂತ್ರಣ' ಕುರಿತು ಖಾಸಗಿ ಮಸೂದೆ ಮಂಡಿಸಲು ಹೋದ ನಟ, ಬಿಜೆಪಿ ಸಂಸದ ರವಿ ಕಿಶನ್ ಟೀಕೆಗೆ ಗುರಿಯಾಗಿದ್ದಾರೆ. ಕಾರಣ ಅವರೇ ಮೂವರು ಪುತ್ರಿಯರು, ಓರ್ವ ಪುತ್ರನನ್ನು ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಟ್ರೋಲ್ ಆಗಿದ್ದಾರೆ. ರವಿ ಕಿಶನ್ ಅವರ ಮಸೂದೆ ಮಂಡಿಸುವ ನೈತಿಕತೆಯೇ ಇಲ್ಲಿ ಪ್ರಶ್ನೆಯಾಗಿದೆ.
ಇದೇ ಮೊದಲಲ್ಲ:ಜನಸಂಖ್ಯಾ ನಿಯಂತ್ರಣದ ಕುರಿತು ಈ ಹಿಂದೆ ಅಂದರೆ 2019 ರಲ್ಲಿ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಪ್ರಸ್ತಾವಿತ ಮಸೂದೆಯು ದಂಪತಿ ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದನ್ನು ತಡೆಯುವ ಗುರಿಯನ್ನು ಹೊಂದಿತ್ತು. ಇದನ್ನು ಮೀರಿದಲ್ಲಿ ಸರ್ಕಾರಿ ಉದ್ಯೋಗ ಮತ್ತು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಮತ್ತು ಸಬ್ಸಿಡಿಗಳಿಗೆ ಅನರ್ಹರಾಗುವ ಬಗ್ಗೆಯೂ ಉಲ್ಲೇಖಿಸಲಾಗಿತ್ತು.
ರಾಕೇಶ್ ಸಿನ್ಹಾರ ಈ ಮಸೂದೆ ರಾಜ್ಯಸಭೆಯಲ್ಲಿ ಪಾಸಾಗಿದ್ದರೂ, ಲೋಕಸಭೆಯಲ್ಲಿ ಸಾರಾಸಗಟಾಗಿ ನಿರಾಕರಿಸಲಾಗಿತ್ತು. ಯಾವ ಸಂಸತ್ತಿನ ಮೂಲಕ ಈ ಕಾನೂನು ಮಾಡಲಾಗುತ್ತಿದೆಯೋ ಅದೇ ಸಂಸತ್ತಿನ ಸದಸ್ಯರು ಎರಡು ಮಕ್ಕಳಿಗಿಂತಲೂ ಹೆಚ್ಚು ಹೊಂದಿರುವುದು ಸೋಜಿಗದ ಸಂಗತಿ. ಈ ಬಗ್ಗೆ ಲೋಕಸಭೆ ವೆಬ್ಸೈಟ್ನಲ್ಲಿರುವ ಸಂಸದರ ಕುಟುಂಬದ ಮಾಹಿತಿಯನ್ನು "ಈಟಿವಿ ಭಾರತ್" ವಿಶ್ಲೇಷಿಸಿದೆ.
ದಿಗ್ಭ್ರಮೆ ಮೂಡಿಸುವ ಮಾಹಿತಿ:ಲೋಕಸಭೆಯ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಒಟ್ಟು 543 ಲೋಕಸಭಾ ಸದಸ್ಯರಿದ್ದಾರೆ. ಅದರಲ್ಲಿ 303 ಬಿಜೆಪಿ, 53 ಕಾಂಗ್ರೆಸ್, 24 ಡಿಎಂಕೆ, 23 ತೃಣಮೂಲ ಕಾಂಗ್ರೆಸ್, 22 ವೈಎಸ್ಆರ್ ಕಾಂಗ್ರೆಸ್, 19 ಶಿವಸೇನೆ, ಜೆಡಿಯುನ 16, ಬಿಜೆಡಿಯ 12, ಬಿಎಸ್‌ಪಿಯ 10 ಮತ್ತು ಇತರ ಸದಸ್ಯರಿದ್ದಾರೆ.
ಈ 543 ಸದಸ್ಯರಲ್ಲಿ 171 ಸದಸ್ಯರು 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಈ ಸಂಖ್ಯೆಯಲ್ಲಿ ಬಿಜೆಪಿ(107) ಸದಸ್ಯರೇ ಸಿಂಹಪಾಲು ಹೊಂದಿದ್ದಾರೆ. ಬಳಿಕ ಕಾಂಗ್ರೆಸ್ (10), ಜೆಡಿಯು (9), ಡಿಎಂಕೆ (6) ಮತ್ತು ಇತರರು 25 ಸಂಸದರಿದ್ದಾರೆ.