ಹೈದರಾಬಾದ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) PFI ಮತ್ತು ಅದರ ಅಂಗಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ದೇಶದ 15 ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದ್ದು, ಈ ವೇಳೆ ಬರೋಬ್ಬರಿ 106 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಇದು ಪಿಎಫ್‌ಐ ವಿರುದ್ಧದ ಅತಿ ದೊಡ್ಡ ಕ್ರಮವಾಗಿತ್ತು. ಎನ್‌ಐಎ ಹೊರತಾಗಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಜ್ಯ ಪೊಲೀಸರೂ ದಾಳಿಯಲ್ಲಿ ಭಾಗಿಯಾಗಿದ್ದರು. ಭಯೋತ್ಪಾದಕ ನಿಧಿ, ತರಬೇತಿ ಶಿಬಿರಗಳು ಮತ್ತು ಸಂಘಟನೆಗೆ ಸೇರಲು ಜನರನ್ನು ಪ್ರಚೋದಿಸುವವರ ಮೇಲೆ ದಾಳಿ ಮಾಡಲಾಗಿತ್ತು.
ದಾಳಿಯ ಸಮಯದಲ್ಲಿ ತನಿಖಾ ಸಂಸ್ಥೆಗಳು ಅನೇಕ ದೋಷಾರೋಪಣೆಯ ದಾಖಲೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಇದರೊಂದಿಗೆ ಹೆಚ್ಚಿನ ಸಂಖ್ಯೆಯ ಡಿಜಿಟಲ್ ಸಾಧನಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಸಂಪೂರ್ಣ ಕಾರ್ಯಾಚರಣೆ ಬಳಿಕ ಇದೀಗ ಕೇಂದ್ರ ಗೃಹ ಸಚಿವಾಲಯ ಪಿಎಫ್‌ಐ ನಿಷೇಧಿಸಿದೆ.
ಪಿಎಫ್‌ಐ ನಿಷೇಧ ಏಕೆ?: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ಸಂಘಟನೆಯನ್ನು 'ಕಾನೂನುಬಾಹಿರ' ಅಥವಾ 'ಭಯೋತ್ಪಾದಕ' ಎಂದು ಘೋಷಿಸಬಹುದು. ಇದನ್ನೇ ಸಾಮಾನ್ಯವಾಗಿ ಆಡುಮಾತಿನಲ್ಲಿ 'ನಿಷೇಧ' ಎನ್ನುತ್ತಾರೆ. ಸಂಘಟನೆಯನ್ನು 'ಕಾನೂನುಬಾಹಿರ' ಅಥವಾ 'ಭಯೋತ್ಪಾದಕ' ಅಥವಾ 'ನಿಷೇಧಿಸಲಾಗಿದೆ' ಎಂದು ಘೋಷಿಸಿದರೆ ಅದರ ಸದಸ್ಯರನ್ನು ಅಪರಾಧಿಗಳೆಂದು ಪರಿಗಣಿಸಬಹುದು ಮತ್ತು ಅದರ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬಹುದು. ಈ ಹಿನ್ನೆಲೆ ಯುಎಪಿಎ ಅಡಿಯಲ್ಲಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ.
ಗೃಹ ಸಚಿವಾಲಯದ ಪ್ರಕಾರ, ಪ್ರಸ್ತುತ ದೇಶದಲ್ಲಿ 42 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲಾಗಿದ್ದು, ಅವುಗಳನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಅನೇಕ ಖಲಿಸ್ತಾನಿ ಸಂಘಟನೆಗಳು, ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಎಲ್‌ಟಿಟಿಇ ಮತ್ತು ಅಲ್ ಖೈದಾ ಮುಂತಾದ 42 ಸಂಘಟನೆಗಳು ಸೇರಿವೆ.
ಸಂಘಟನೆಯನ್ನು ಯಾವಾಗ 'ಭಯೋತ್ಪಾದಕ' ಎಂದು ಪರಿಗಣಿಸಬೇಕು: ಯುಎಪಿಎಯ ಸೆಕ್ಷನ್ 35ರ ಪ್ರಕಾರ ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಆದರೆ ಸಂಘಟನೆಯು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದೆ ಎಂದು ಕೇಂದ್ರ ಭಾವಿಸಿದರೆ ಮಾತ್ರ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗುವುದು.
- ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅಥವಾ ನಡೆಸಿದರೆ..
- ಭಯೋತ್ಪಾದಕ ಸಂಚನ್ನು ಯೋಜಿಸುತ್ತಿರುವ ಸಂಘಟನೆ..
- ಭಯೋತ್ಪಾದನೆಯನ್ನು ಉತ್ತೇಜಿಸುಸುವ ಸಂಘಟನೆ..
- ಅಥವಾ ಯಾವುದೇ ರೀತಿಯಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆ..
ಇದು ನಿಷೇಧ ಸಂಘಟನೆ ಮೇಲೆ ಯಾವ ಪರಿಣಾಮ ಬೀರುತ್ತದೆ: ಒಂದು ಸಂಘಟನೆಯನ್ನು 'ನಿಷೇಧಿಸಿದರೆ' ಅಥವಾ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದರೆ ಅದರ ಧನಸಹಾಯ ಸ್ಥಗಿತಗೊಳ್ಳುತ್ತದೆ. ಅದರ ಅಂಗಸಂಸ್ಥೆಗಳು ಅಪರಾಧಿಗಳಾಗುತ್ತವೆ. UAPA ಯ ಸೆಕ್ಷನ್ 38ರ ಅಡಿಯಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗೆ ಒಂದರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಆದರೆ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಮುನ್ನ ಸಂಘಟನೆ ತೊರೆದಿರುವ ಅಥವಾ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಅದೇ ರೀತಿ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವ ವ್ಯಕ್ತಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಯಾರಾದರೂ ಅಂತಹ ಸಂಸ್ಥೆಗಳಿಗೆ ಹಣವನ್ನು ನೀಡಿದರೆ ಅವರಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಜೊತೆಗೆ, ಒಬ್ಬ ವ್ಯಕ್ತಿಯು ಭಯೋತ್ಪಾದಕ ಗುಂಪು ಅಥವಾ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದರೆ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು ಎಂದು ಯುಎಪಿಎ ಸೆಕ್ಷನ್ 20 ಹೇಳುತ್ತದೆ.
ಓದಿ:Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ