ನವದೆಹಲಿ:ಇಂದು ವಿಶ್ವ ಮಧುಮೇಹ ದಿನ. ಇದರ ಅಂಗವಾಗಿ ದೇಶದ ಅತಿ ದೊಡ್ಡ ಆಸ್ಪತ್ರೆಯಾದ ದೆಹಲಿಯ ಏಮ್ಸ್, ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಇನ್ಸುಲಿನ್ ಚುಚ್ಚುಮದ್ದು ನೀಡಲು ನಿರ್ಧರಿಸಿದೆ. ಎಐಐಎಂಎಸ್ ನಿರ್ದೇಶಕ ಪ್ರೊಫೆಸರ್ ಎಂ ಶ್ರೀನಿವಾಸ್ ನೇತೃತ್ವದಲ್ಲಿ ಮಂಗಳವಾರ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಇಂಥದ್ದೊದು ಜನಪರ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಪ್ರಯತ್ನವು ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವಾಗಲಿದೆ. ಅವರು ತಮ್ಮ ನಿಯಮಿತ ಚಿಕಿತ್ಸೆಗೆ ಅಗತ್ಯವಾದ ದುಬಾರಿ ಇನ್ಸುಲಿನ್ ಚುಚ್ಚುಮದ್ದು ಪಡೆಯಲು ಕಷ್ಟಪಡುತ್ತಾರೆ. ಇಂದಿನಿಂದ ಆರಂಭಿಸಲಾಗಿರುವ ಈ ಸೌಲಭ್ಯವು ಎಲ್ಲ ಏಮ್ಸ್ ಆಸ್ಪತ್ರೆಯ ಒಪಿಡಿಗಳಲ್ಲಿ ಲಭ್ಯವಿರುತ್ತದೆ. ವೈದ್ಯರು ಶಿಫಾರಸು ಮಾಡಿದ ರೋಗಿಗಳಿಗೆ ಇನ್ಸುಲಿನ್ ಚುಚ್ಚುಮದ್ದು ದೊರೆಯಲಿದೆ.
ಏಮ್ಸ್ ಆಸ್ಪತ್ರೆಯಲ್ಲಿ ಎರಡು ಕೇಂದ್ರ:ದೆಹಲಿಯ ಏಮ್ಸ್ ಕ್ಯಾಂಪಸ್‌ನ ರಾಜಕುಮಾರಿ ಅಮೃತ್ ಕೌರ್ ಒಪಿಡಿ ವಿಭಾಗದಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ರೋಗಿಗಳಿಗೆ ವೈದ್ಯರ ಶಿಫಾರಸಿನ ಮೇರೆಗೆ ಉಚಿತ ಇನ್ಸುಲಿನ್ ಚುಚ್ಚುಮದ್ದನ್ನು ನೀಡಲಾಗುತ್ತದೆ. ಇನ್ಸುಲಿನ್ ವಿತರಣಾ ಕೌಂಟರ್, ಔಷಧಗಳನ್ನು ವಿತರಣೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮೌಖಿಕ ಮತ್ತು ಲಿಖಿತ ಸೂಚನೆಗಳನ್ನು ನೀಡಲಾಗುತ್ತದೆ. ಇಲ್ಲಿ ಇನ್ಸುಲಿನ್ ಚುಚ್ಚುಮದ್ದಿನ ಸರಿಯಾದ ಶೇಖರಣೆ ಮತ್ತು ನಿರ್ವಹಣೆಯ ಬಗ್ಗೆ ಅಗತ್ಯ ಸಲಹೆಯನ್ನು ಸಹ ನೀಡಲಾಗುತ್ತದೆ.