ಜೈಪುರ (ರಾಜಸ್ಥಾನ): ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವುದರಿಂದ ರಾಜ್ಯ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಗೆಹ್ಲೋಟ್ ಬೆಂಬಲಿಸಿ 92 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಪೀಕರ್ ಸಿಪಿ ಜೋಷಿ ಅವರನ್ನು ಶಾಸಕರು ಭೇಟಿ ಮಾಡಿದ್ದಾರೆ.
ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಕಾಂಗ್ರೆಸ್ ಸಿದ್ಧಾಂತಕ್ಕೆ ಅನುಗುಣವಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮುನ್ನ ಅಶೋಕ್ ಗೆಹ್ಲೋಟ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಎಐಸಿಸಿ ಉಸ್ತುವಾರಿ ಅಜಯ್ ಮಕೇನ್ ಜೈಪುರಕ್ಕೆ ಬಂದಿದ್ದಾರೆ.
ಆದರೆ, ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಸಮಾವೇಶಗೊಂಡ ಸಿಎಂ ಅಶೋಕ್ ಗೆಹ್ಲೋಟ್ ಬೆಂಬಲಿತ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸ್ಪಷ್ಟವಾಗಿ ನಿರಾಕರಿಸಿದರು, 'ಹಮ್ ಸಬ್ ಏಕ್ ಹೈ' ಘೋಷಣೆಗಳನ್ನು ಎತ್ತಿದರು. ಮೂಲಗಳ ಪ್ರಕಾರ, ಶಾಂತಿ ಧರಿವಾಲ್ ನಿವಾಸದಲ್ಲಿರುವ ಸುಮಾರು 92 ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಸಿಪಿ ಜೋಶಿ ಅವರಿಗೆ ನೀಡಲು ನಿರ್ಧರಿಸಿದ್ದಾರೆ.
ಇದಕ್ಕಾಗಿ ಎಲ್ಲಾ ಶಾಸಕರು ಬಸ್ನಲ್ಲಿ ಸ್ಪೀಕರ್ ಸಿಪಿ ಜೋಶಿ ನಿವಾಸಕ್ಕೆ ಆಗಮಿಸಿದ್ದಾರೆ. ಇದರ ನಡುವೆ ಆಹಾರ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರು, ಎಲ್ಲ ಶಾಸಕರು ಕೋಪಗೊಂಡಿದ್ದಾರೆ. ಅದಕ್ಕಾಗಿಯೇ ನಾವು ರಾಜೀನಾಮೆ ನೀಡಲು ವಿಧಾನ ಸಭಾಧ್ಯಕ್ಷರ ಮೊರೆ ಹೋಗುತ್ತಿದ್ದೇವೆ. ತಮ್ಮ ಸಲಹೆ ಕೇಳದೆ ಸಿಎಂ ಅಶೋಕ್ ಗೆಹ್ಲೋಟ್ ನಿರ್ಧಾರ ಹೇಗೆ ತೆಗೆದುಕೊಳ್ಳುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆ: ಕಲಬುರಗಿಯಿಂದ ನೇರವಾಗಿ ಜೈಪುರಕ್ಕೆ ಬಂದ ಖರ್ಗೆ