ಹೈದರಾಬಾದ್(ತೆಲಂಗಾಣ):ಕಳೆದ ಕೆಲ ತಿಂಗಳಿಂದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಇದೀಗ ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ಕಾರಣಕ್ಕಾಗಿ ಇಂದು ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನ ಭೇಟಿ ಮಾಡಿ, ದೆಹಲಿ ವಿಮಾನವೇರಿದ್ದಾರೆ.
ತೆಲಂಗಾಣದಲ್ಲಿ ಮೂರನೇ ಅವಧಿಗೆ ಸರ್ಕಾರ ರಚನೆ ಹಾಗೂ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಸಿಆರ್ ಈಗಾಗಲೇ ಮೋದಿ ವಿರುದ್ಧ ರಣಕಹಳೆ ಉದಿದ್ದು, ಅವರನ್ನ ಸೋಲಿಸಲು ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂಬ ಸಂದೇಶ ಸಾರಿದ್ದಾರೆ. ಇದರ ಬೆನ್ನಲ್ಲೇ ಇಂದು ಪ್ರಶಾಂತ್ ಕಿಶೋರ್ ಅವರನ್ನ ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದರು. ಮುಂದಿನ ವರ್ಷ ಡಿಸೆಂಬರ್ ತಿಂಗಳಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಂದು ಅವಧಿಗೆ ಟಿಆರ್ಎಸ್ ಪಕ್ಷವನ್ನ ಅಧಿಕಾರಕ್ಕೆ ತರುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ. ಜೊತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇರಾದೆ ಹೊಂದಿದ್ದು, ಇದೇ ಕಾರಣಕ್ಕಾಗಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನ ಭೇಟಿ ಮಾಡಿದ್ದಾರೆ.