ಕರ್ನಾಟಕ

karnataka

ETV Bharat / bharat

'ಉಚಿತ ಕೊಡುಗೆ' ಘೋಷಿಸಿದ್ದಕ್ಕೆ ರಾಜಕೀಯ ಪಕ್ಷಗಳ ನೋಂದಣಿ ರದ್ದು ಅಸಾಧ್ಯ : ಚುನಾವಣಾ ಆಯೋಗ

ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಘೋಷಿಸುವ ಉಚಿತ ಕೊಡುಗೆಗಳು ಲಂಚ, ಪ್ರಭಾವ ಬೀರುವ ಅಂಶ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದರ ಆಧಾರದ ಮೇಲೆ ಆ ಪಕ್ಷಗಳ ನೋಂದಣಿಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ..

political-parties
ಚುನಾವಣಾ ಆಯೋಗ

By

Published : Apr 9, 2022, 4:08 PM IST

Updated : Apr 9, 2022, 4:31 PM IST

ನವದೆಹಲಿ :ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಿಸುವ ದುಬಾರಿಯಾದ 'ಉಚಿತ ಯೋಜನೆಗಳ' ಆಧಾರದ ಮೇಲೆ ಅಂತಹ ಪಕ್ಷಗಳ ಮಾನ್ಯತೆಯನ್ನು ರದ್ದು ಮಾಡಲು ಬರುವುದಿಲ್ಲ. ಕಾನೂನಾತ್ಮಕವಾಗಿ ಅಂತಹ ಅಧಿಕಾರ ತನಗೆ ಇಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಬಿಜೆಪಿ ನಾಯಕ, ವಕೀಲ ಅಶ್ವಿನಿಕುಮಾರ್​ ಅವರು ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಸಾರ್ವಜನಿಕ ತೆರಿಗೆಯನ್ನೇ ಬಳಸಿಕೊಂಡು 'ಉಚಿತ ಯೋಜನೆ'ಗಳನ್ನು ಘೋಷಿಸುವುದನ್ನು ಅಕ್ರಮ ಎಂದು ಪರಿಗಣಿಸಿ, ಅಂತಹ ರಾಜಕೀಯ ಪಕ್ಷಗಳ ಮಾನ್ಯತೆಯನ್ನೇ ರದ್ದು ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಸ್ಪಷ್ಟನೆಗೆ​ ಚುನಾವಣಾ ಆಯೋಗ ಉತ್ತರ ನೀಡಿದೆ.

ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ 'ಉಚಿತ' ಭರವಸೆಗಳನ್ನು ಘೋಷಿಸುತ್ತವೆ. ಅವು ಆ ಪಕ್ಷದ ನೀತಿ-ನಿರ್ಧಾರವಾಗಿವೆ. ಅಂತಹ ಘೋಷಣೆಗಳು ನಮಗೆ ಪೂರಕವೋ, ಮಾರಕವೋ ಎಂಬುದನ್ನು ಜನರೇ ನಿರ್ಧರಿಸಬೇಕು. ರಾಜಕೀಯ ಪಕ್ಷಗಳು ಚುನಾವಣೆಯ ಮೊದಲು ಅಥವಾ ನಂತರ ತೆಗೆದುಕೊಳ್ಳಬಹುದಾದ ನೀತಿ-ನಿರ್ಧಾರಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಒಂದು ವೇಳೆ ಹೀಗೆ ಮಾಡಿದಲ್ಲಿ ಅದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಸುಪ್ರೀಂಕೋರ್ಟ್​ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕಾನೂನು ರೂಪಿಸಲು ಶಿಫಾರಸು :ಐಎನ್​ಸಿ ಮತ್ತು ಸಮಾಜ ಕಲ್ಯಾಣ-2000ರ ಪ್ರಕರಣದ ತೀರ್ಪಿನ ಪ್ರಕಾರ, ರಾಜಕೀಯ ಪಕ್ಷಗಳನ್ನು ಕೇವಲ ಮೂರು ಆಧಾರದ ಮೇಲೆ ಮಾತ್ರ ನೋಂದಣಿ ರದ್ದು ಮಾಡಬಹುದು. ಮೋಸ, ನಕಲಿಯಾಗಿ ನೋಂದಣಿ ಮಾಡಿಕೊಂಡಿದ್ದರೆ, ಒಂದು ಪಕ್ಷವು ಸಂವಿಧಾನಾತ್ಮಕ ನಂಬಿಕೆಗಳ ವಿರುದ್ಧ ಕೆಲಸ ಮಾಡುತ್ತಿದ್ದರೆ, ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ಧಕ್ಕೆ ತಂದ ಸಂದರ್ಭದಲ್ಲಿ ಮಾತ್ರ ಅಂತಹ ಪಕ್ಷಗಳ ನೋಂದಣಿ ರದ್ದು ಮಾಡಲು ಸಾಧ್ಯ ಎಂದಿದೆ.

ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆ, ಕೊಡುಗೆಗಳನ್ನು ನೀಡುವುದಕ್ಕೆ ನಿರ್ಬಂಧಿಸಿದಲ್ಲಿ ಅಂತಹ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪಧಿಸುವ ಮೊದಲೇ ಶಕ್ತಿ ಕಳೆದುಕೊಳ್ಳಲಿವೆ. ಇದು ಸಂವಿಧಾನದಲ್ಲಿ ನೀಡಲಾದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದಿದೆ. ಇದಲ್ಲದೇ, ರಾಜಕೀಯ ಪಕ್ಷಗಳ ನೋಂದಣಿ ಮತ್ತು ರದ್ದುಗೊಳಿಸುವ ಅಗತ್ಯ ಕಾನೂನು ರೂಪಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ.

ಬಿಜೆಪಿ ಸದಸ್ಯ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು, ಸಾರ್ವಜನಿಕ ನಿಧಿಯಿಂದ ಉಚಿತ ಕೊಡುಗೆಗಳನ್ನು ನೀಡುವ ರಾಜಕೀಯ ಪಕ್ಷದ ನೋಂದಣಿ ರದ್ದುಗೊಳಿಸಬೇಕು. ಹೀಗೆ ಘೋಷಿಸಿದಲ್ಲಿ ಅದು ಆ ಪಕ್ಷಗಳು ಲಂಚ ಮತ್ತು ಪ್ರಭಾವ ಬೀರಿದಂತಾಗುತ್ತದೆ ಎಂದು ಪರಿಗಣಿಸಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಓದಿ;ಇಮ್ರಾನ್​​ಖಾನ್​ಗೆ ಭಾರತ ಇಷ್ಟವಿದ್ದರೆ, ಪಾಕ್ ತೊರೆಯಲಿ: ಮರ್ಯಮ್ ಖಾನ್

Last Updated : Apr 9, 2022, 4:31 PM IST

ABOUT THE AUTHOR

...view details