ಕರ್ನಾಟಕ

karnataka

ETV Bharat / bharat

ನೇಪಾಳದಲ್ಲಿ ರಾಜಕೀಯ ಅಸ್ಥಿರತೆ; ಸುಪ್ರೀಂ ಕೋರ್ಟ್​ನತ್ತ ಎಲ್ಲರ ಚಿತ್ತ - ಚೀನಾ ನೇಪಾಳ ಭಾರತ ವಿವಾದ

2015 ರಲ್ಲಿ ನೇಪಾಳದ ಹೊಸ ಸಂವಿಧಾನವನ್ನು ರಚಿಸಲಾಗಿತ್ತು. ಹೊಸ ಸಂವಿಧಾನದ ಪ್ರಕಾರ ಪ್ರಧಾನಿಗೆ ಸಂಸತ್ತಿನ ಕೆಳಮನೆಯನ್ನು ವಿಸರ್ಜನೆ ಮಾಡುವಂತೆ ಶಿಫಾರಸು ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಆಗ ಸಂವಿಧಾನ ರಚಿಸಿದ ತಜ್ಞರು ಹೆಮ್ಮೆಯಿಂದ ಹೇಳಿಕೊಂಡಿದ್ದರು. 1990ರ ದೇಶದ ಸಂವಿಧಾನದ ಪ್ರಕಾರ ಇಂಥದೊಂದು ಅಧಿಕಾರ ಪ್ರಧಾನಿಗೆ ಇತ್ತು.

Political instability in Nepal; ball in Supreme Court
ನೇಪಾಳದಲ್ಲಿ ರಾಜಕೀಯ ಅಸ್ಥಿರತೆ; ಸುಪ್ರೀಂ ಕೋರ್ಟ್​ನತ್ತ ಎಲ್ಲರ ಚಿತ್ತ

By

Published : May 29, 2021, 8:01 AM IST

ಪ್ರಸ್ತುತ ಸಮಯದಲ್ಲಿ ಬಹುತೇಕ ನೇಪಾಳಿ ಜನತೆ ತಮ್ಮ ದೇಶದ ಪ್ರಧಾನ ಮಂತ್ರಿ ಕೆಪಿ ಶರ್ಮಾ ಒಲಿ ಹಾಗೂ ಅಧ್ಯಕ್ಷ ಭಂಡಾರಿ ವಿರುದ್ಧ ಭಾರಿ ಸಿಟ್ಟಾಗಿದ್ದಾರೆ. ಪ್ರಧಾನಿ ಹಾಗೂ ಅಧ್ಯಕ್ಷ ಇಬ್ಬರೂ ಸೇರಿಕೊಂಡು ನೇಪಾಳದ ಸಂವಿಧಾನವನ್ನು ಹಾಳುಗೆಡವಿ, ದೇಶದ ಸಂಸತ್ತಿನ ಕೆಳಮನೆಯನ್ನು (ಜನಪ್ರತಿನಿಧಿಗಳ ಸಂಸತ್ತು ಅಥವಾ ಜನಪ್ರತಿನಿಧಿ ಸಭಾ ಎಂದು ಕರೆಯಲಾಗುತ್ತದೆ) ವಿಸರ್ಜಿಸಲು ಯತ್ನಿಸುತ್ತಿದ್ದಾರೆ ಎಂಬ ಕಾರಣಕ್ಕೆ ಜನ ಈ ಇಬ್ಬರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆದರೆ ಒಲಿ ಹಾಗೂ ಭಂಡಾರಿ ಇಬ್ಬರೂ ತಮ್ಮ ವಿರುದ್ಧದ ಆಪಾದನೆಗಳನ್ನು ತಳ್ಳಿಹಾಕಿದ್ದು, ತಾವು ಮಾಡುತ್ತಿರುವುದು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.

2015 ರಲ್ಲಿ ನೇಪಾಳದ ಹೊಸ ಸಂವಿಧಾನವನ್ನು ರಚಿಸಲಾಗಿತ್ತು. ಹೊಸ ಸಂವಿಧಾನದ ಪ್ರಕಾರ ಪ್ರಧಾನಿಗೆ ಸಂಸತ್ತಿನ ಕೆಳಮನೆಯನ್ನು ವಿಸರ್ಜನೆ ಮಾಡುವಂತೆ ಶಿಫಾರಸು ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಆಗ ಸಂವಿಧಾನ ರಚಿಸಿದ ತಜ್ಞರು ಹೆಮ್ಮೆಯಿಂದ ಹೇಳಿಕೊಂಡಿದ್ದರು. 1990ರ ದೇಶದ ಸಂವಿಧಾನದ ಪ್ರಕಾರ ಇಂಥದೊಂದು ಅಧಿಕಾರ ಪ್ರಧಾನಿಗೆ ಇತ್ತು.

ಆದರೆ ಕಳೆದ ಆರು ತಿಂಗಳ ಅವಧಿಯಲ್ಲಿ ಪ್ರಧಾನಿ ಒಲಿ ತನ್ನ ರಾಜಕೀಯ ಎದುರಾಳಿಗಳಿಗೆ ಮರ್ಮಾಘಾತ ನೀಡುತ್ತಿದ್ದು, ಒಲಿ ಹಾಗೂ ಭಂಡಾರಿ ಇಬ್ಬರೂ ಸೇರಿಕೊಂಡು ಕಳೆದ ಡಿಸೆಂಬರ್ 20 ಹಾಗೂ ನವೆಂಬರ್ 22 ರಂದು ಸಂಸತ್ತನ್ನು ವಿಸರ್ಜಿಸುವ ಪ್ರಯತ್ನ ಮಾಡಿದ್ದರು.

ಒಂದೊಮ್ಮೆ ನೇಪಾಳದ ಸಂಸತ್ತು ವಿಸರ್ಜನೆ ಆದಲ್ಲಿ ಮುಂದಿನ ಆರು ತಿಂಗಳೊಳಗೆ ಮಧ್ಯಂತರ ಚುನಾವಣೆಗಳು ನಡೆಯಬೇಕಾಗುತ್ತವೆ. ಪ್ರಧಾನಿ ಒಲಿ ಸಂಸತ್ತಿನ ವಿಸರ್ಜನೆಗೆ ಶಿಫಾರಸು ಮಾಡಿದಾಗಲೆಲ್ಲ ಅಧ್ಯಕ್ಷೆ ಭಂಡಾರಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಅವರ ಏಕಪಕ್ಷೀಯ ನಿರ್ಣಯವಾಗಿದೆ ಹಾಗೂ ಅವರು ಈ ಕುರಿತಾದ ಸಂವಿಧಾನದ 76ನೇ ವಿಧಿಯನ್ನು ಗಣನೆಗೇ ತೆಗೆದುಕೊಂಡಿಲ್ಲ ಎನ್ನುತ್ತಾರೆ ಒಲಿ ವಿರೋಧಿಗಳು. 2020ರ ಡಿಸೆಂಬರ್ 20 ಹಾಗೂ ಈ ವರ್ಷ ಅಂದರೆ ಮೊನ್ನೆ ಮೇ ತಿಂಗಳಿನ 22 ರಂದು ಒಲಿ ಏನು ಬಯಸುತ್ತಾರೋ ಅದನ್ನೇ ಅಧ್ಯಕ್ಷರು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ಸಂವಿಧಾನವನ್ನು ಹಾಳು ಮಾಡುವಂಥ ಯಾವುದೇ ಕೆಲಸವನ್ನು ತಾವು ಮಾಡುತ್ತಿಲ್ಲ ಎಂದು ಪ್ರಧಾನ ಮಂತ್ರಿಗಳ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಕಚೇರಿಯು ಹೇಳಿದ್ದು, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿವೆ.

ಅಧ್ಯಕ್ಷೆ ಭಂಡಾರಿ ಇವರು ನಿರಂತರವಾಗಿ ತಮ್ಮದೇ ಪಕ್ಷದ ಅಧ್ಯಕ್ಷರ ಆದೇಶಗಳನ್ನು ಕಡೆಗಣಿಸುತ್ತಿದ್ದು, ಒಲಿಯವರ ಆಕಾಂಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ದೇಶದ ಅತ್ಯಂತ ಉನ್ನತ ಹಾಗೂ ಗೌರವಾನ್ವಿತ ಹುದ್ದೆಯ ಘನತೆ ಕಳೆಯುತ್ತಿದ್ದಾರೆ ಎಂದು ವಿರೋಧಿಗಳು ಆರೋಪಿಸಿದ್ದಾರೆ.

ಅಧ್ಯಕ್ಷೆ ಭಂಡಾರಿ ಇವರು ನೇಪಾಳದ ಎರಡನೇ ಅಧ್ಯಕ್ಷೆಯಾಗಿದ್ದಾರೆ ಎಂಬುದು ಗಮನಾರ್ಹ.

ಇಷ್ಟಾದರೂ ಒಲಿ ಆತ್ಮವಿಶ್ವಾಸಕ್ಕೆ ಕಾರಣವೇನು?

ಒಲಿಯನ್ನು ಅವರ ಬೆಂಬಲಿಗರು ಎರಡು ಪ್ರಮುಖ ಕಾರಣಗಳಿಗಾಗಿ ಮೆಚ್ಚಿಕೊಳ್ಳುತ್ತಾರೆ. ಮೊದಲನೆಯದಾಗಿ, ಅವರ ಭಾರತ ವಿರೋಧಿ ನಿಲುವು. 2015ರಲ್ಲಿ ನೇಪಾಳದ ಸಂವಿಧಾನ ಜಾರಿಗೊಳಿಸುವ ಸಮಯದಲ್ಲಿ ದಕ್ಷಿಣ ತರಾಯ್-ಮಧ್ಯ ಮಧೇಸಿ ಪಕ್ಷಗಳ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಭಾರತ ನೇಪಾಳದ ಮೇಲೆ ಬಲವಾದ ಒತ್ತಡ ಹೇರಿತ್ತು. ಆದರೆ ಆ ಸಮಯದಲ್ಲಿ ಒಲಿ ಭಾರತದ ಬಲವಂತಕ್ಕೆ ಬಗ್ಗಿರಲಿಲ್ಲ. ಇದರಿಂದಾಗಿ ಭಾರತ ಹಾಗೂ ನೇಪಾಳ ಗಡಿಯು ತಿಂಗಳುಗಟ್ಟಲೆ ಬಂದ್ ಆಗಿತ್ತು. ಆಗ ಸಂಭವಿಸಿದ ಭೂಕಂಪ ಹಾಗೂ ಅದೇ ಸಮಯಕ್ಕೆ ಗಡಿ ಬಂದ್ ಆಗಿದ್ದರಿಂದ ನೇಪಾಳಿ ಜನತೆ ಇನ್ನಿಲ್ಲದ ಕಷ್ಟ ಪಡುವಂತಾಗಿತ್ತು.

ಎರಡನೆಯದಾಗಿ, ಒಲಿ ಹೊಸ ನೇಪಾಳ ನಕ್ಷೆ ಬಿಡುಗಡೆ ಮಾಡಿದ್ದು. ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್, ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೇಖ ಮೂಲಕ ಕೈಲಾಶ ಮಾನಸರೋವರಕ್ಕೆ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ಅಂದರೆ ಮೇ 20, 2020ರಂದು ಒಲಿ ಹೊಸ ನಕ್ಷೆ ಜಾರಿಗೊಳಿಸಿದ್ದರು. ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೇಖ ಪ್ರದೇಶವು ಉತ್ತರಾಖಂಡ ರಾಜ್ಯಕ್ಕೆ ಸೇರಿದ್ದು ಎಂದು ಭಾರತ ಪರಿಗಣಿಸುತ್ತದೆ. ಆದರೆ 1816ರ ಬ್ರಿಟಿಷ್ ಇಂಡಿಯಾ ಹಾಗೂ ನೇಪಾಳ ಮಧ್ಯದ ಸುಗೌಲಿ ಒಪ್ಪಂದದ ಪ್ರಕಾರ ಈ ಪ್ರದೇಶ ತನಗೆ ಸೇರಿದ್ದೆಂದು ನೇಪಾಳ ವಾದಿಸುತ್ತದೆ.

ಈ ಒಪ್ಪಂದದಂತೆ ಮಹಾಕಾಳಿ ನದಿಯು ಎರಡೂ ದೇಶಗಳನ್ನು ಬೇರ್ಪಡಿಸುವ ಗಡಿಯಾಗಿದೆ. ಆದರೆ ಈ ನದಿ ಎಲ್ಲಿ ಉಗಮವಾಗುತ್ತದೆ ಎಂಬುದನ್ನು ನಿರ್ಧರಿಸಿ ಗಡಿಗಳನ್ನು ಗುರುತಿಸಲು ಭಾರತ ಹಾಗೂ ನೇಪಾಳ ಎರಡಕ್ಕೂ ಇವರೆಗೆ ಸಾಧ್ಯವಾಗಿಲ್ಲ.

ಮೇ 22ರಂದು ಸಂಸತ್ತಿನ ವಿಸರ್ಜನೆಯ ನಂತರ ಒಲಿಯ ಆತ್ಮವಿಶ್ವಾಸ ಹೆಚ್ಚಾಗಲು ಮತ್ತೊಂದು ಕಾರಣವಿದೆ. ಜನತಾ ಸಮಾಜವಾದಿ ಪಕ್ಷದ ಮಹಂತಾ ಠಾಕೂರ್ ಹಾಗೂ ರಾಜೇಂದ್ರ ಮಹತೊ ಸೇರಿದಂತೆ ಮಧೇಸಿ ಗುಂಪಿನ ಕೆಲ ನಾಯಕರು ಒಲಿ ಪರವಾಗಿ ನಿಂತಿದ್ದು ಇದಕ್ಕೆ ಕಾರಣ.

ಸುಪ್ರೀಂ ಕೋರ್ಟ್​ನತ್ತ ಎಲ್ಲರ ಚಿತ್ತ

ಈಗ ವಿಷಯ ಮತ್ತೆ ಸುಪ್ರೀಂ ಕೋರ್ಟ್‌ಗೆ ತಲುಪಿದ್ದು, ಒಲಿ ಮತ್ತು ಭಂಡಾರಿ ಅವರ ಸದನವನ್ನು ವಿಸರ್ಜಿಸುವ ಕ್ರಮವನ್ನು ತಿರಸ್ಕರಿಸಿ ಸಂಸತ್ತನ್ನು ಪುನಃ ಸ್ಥಾಪಿಸಲಾಯಿತು. ಈಗ ಗುರುವಾರದಂದು ಒಲಿ-ಭಂಡಾರಿ ನಡೆಯನ್ನು ವಿರೋಧಿಸಿ ಸಲ್ಲಿಸಿದ ಹಲವಾರು ರಿಟ್ ಅರ್ಜಿಗಳ ಕುರಿತು ನ್ಯಾಯಾಲಯ ವಿಚಾರಣೆಯನ್ನು ಪ್ರಾರಂಭಿಸಿದೆ. ಅಲ್ಲದೆ, ಒಲಿ ಮತ್ತು ಭಂಡಾರಿ ಅವರ ನಡೆಗಳನ್ನು ಸಮರ್ಥಿಸುವ ಅರ್ಜಿಗಳು ಸಹ ಕೋರ್ಟ್ ಮುಂದೆ ಬಂದಿವೆ.

ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ 146 ಪ್ರತಿಪಕ್ಷದ ಶಾಸಕರು ಒಲಿ ಮತ್ತು ಭಂಡಾರಿ ಸಂವಿಧಾನದ ಆರ್ಟಿಕಲ್ 76 ರ ನಿಬಂಧನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ತನ್ನ ಹೊಸ ತೀರ್ಪನ್ನು ಪ್ರಕಟಿಸುವವರೆಗೆ, ರಾಜಕೀಯ ಅನಿಶ್ಚಿತತೆಗಳ ಮೋಡಗಳು ನೇಪಾಳದ ಮೇಲೆ ಸುಳಿದಾಡುತ್ತಲೇ ಇರುತ್ತವೆ.

ಅಂಕಣ : ಸುರೇಂದ್ರ ಫುಯಲ್, ಸ್ವತಂತ್ರ ಪತ್ರಕರ್ತ, ಕಾಠ್ಮಂಡು, ನೇಪಾಳ

ABOUT THE AUTHOR

...view details