ನವದೆಹಲಿ: ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಮಾತನಾಡಿ, ತಮ್ಮ ಬೇಸರ ಹೊರಹಾಕಿದ್ದಾರೆ. ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಹೀಗಾಗಿ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಸಿಬಲ್, ಗಡಿ ರಾಜ್ಯವಾಗಿರುವ ಪಂಜಾಬ್ನಲ್ಲಿ ನಡೆಯುತ್ತಿರುವ ರಾಜಕೀಯ ಅರಾಜಕತೆಯಿಂದ ಪಾಕಿಸ್ತಾನ ಹಾಗೂ ಐಎಸ್ಐಗೆ ಲಾಭವಾಗಲಿದೆ. ಕಾಂಗ್ರೆಸ್ನಲ್ಲಿ ಈ ರೀತಿಯ ಅರಾಜಕತೆ ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:ವಿಮಾನ ಸೇವೆ ಪುನರಾರಂಭಿಸುವಂತೆ ಭಾರತಕ್ಕೆ ತಾಲಿಬಾನ್ ಮನವಿ
ಪಕ್ಷದಲ್ಲಿ ಅಧ್ಯಕ್ಷರಿಲ್ಲದ ಕಾರಣಕ್ಕಾಗಿ ಈ ರೀತಿಯ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಪಕ್ಷದಲ್ಲಿ ಒಂದಿಷ್ಟು ಚರ್ಚೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಬೇಕು. ಕಾಂಗ್ರೆಸ್‌ನಿಂದ ಮಾತ್ರವೇ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ. ಪಕ್ಷದ ಬಲವರ್ಧನೆ ಬಗ್ಗೆ ನಾವು ಯೋಚನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ನಾವು ಜಿ-23 ಸದಸ್ಯರು. ಜಿ ಹುಜೂರ್-23 ಎನ್ನುವವರಲ್ಲ. (ಎಲ್ಲದಕ್ಕೂ ಹೌದು, ಹೌದು ಎನ್ನುವರರಲ್ಲ) ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ಈ ಹಿಂದಿನಿಂದಲೂ ನಾವು ಪ್ರಸ್ತಾಪ ಮಾಡುತ್ತಲೇ ಇದ್ದೇವೆ. ಪಕ್ಷದಲ್ಲಿ ಮಹತ್ವದ ಬದಲಾವಣೆ ಬರಬೇಕು. ನಾಯಕತ್ವದ ಅವಶ್ಯಕತೆ ಇದೆ ಎಂದು ಕಳೆದ ವರ್ಷವೇ ಪತ್ರ ಬರೆದಿದ್ದ ಹಿರಿಯ ನಾಯಕರಲ್ಲಿ ಕಪಿಲ್ ಸಿಬಲ್ ಕೂಡ ಒಬ್ಬರು ಎಂಬುದು ಗಮನಾರ್ಹ ವಿಚಾರ.
ಪಂಜಾಬ್ ಕಾಂಗ್ರೆಸ್ನಲ್ಲಿ ಕಳೆದ ಕೆಲ ದಿನಗಳಿಂದ ರಾಜಕೀಯ ಅಸ್ಥಿರತೆ ಉದ್ಭವವಾಗಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನವಜೋತ್ ಸಿಂಗ್ ಸಿಧು ಸಹ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಚಿವೆ ರಜಿಯಾ ಸುಲ್ತಾನಾ ಸೇರಿದಂತೆ ಅನೇಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.