ಕೋಲ್ಕತ್ತಾ : ಮುಂದಿನ ವರ್ಷದ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನವೇ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಕ್ಷೇತ್ರ ಡಾರ್ಜಿಲಿಂಗ್‌ನ ಚಹಾದ ಹಬೆ ತಟ್ಟಲು ಶುರುವಾಗಿದೆ.
ಮೂರು ವರ್ಷಗಳ ವಿರಾಮದ ಬಳಿಕ ಡಾರ್ಜಿಲಿಂಗ್‌ನ ಹಿಲ್ಸ್ ಮತ್ತು ತೆರೈ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳಿಗೂ ದೊಡ್ಡದೊಂದು ಸವಾಲು ಎದುರಾಗಿದೆ. ಅದೇನೆಂದರೆ, 2017 ರಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆರೋಪದ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲ್ಪಟ್ಟು, ಬಳಿಕ ತಲೆ ಮರೆಸಿಕೊಂಡಿದ್ದ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಮಾಜಿ ಮುಖ್ಯಸ್ಥ ಬಿಮಲ್ ಗುರುಂಗ್ ಮತ್ತೆ ಕಣಿವೆ ನಾಡು ಡಾರ್ಜಿಲಿಂಗ್ಗೆ ಪ್ರವೇಶ ಮಾಡಿದ್ದಾರೆ.
2017ರಲ್ಲಿ ಡಾರ್ಜಿಲಿಂಗ್‌ನ ಬೆಟ್ಟ ಪ್ರದೇಶಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ವೇಳೆ ಘರ್ಷಣೆ ನಡೆದು ಪೊಲೀಸ್ ಗುಂಡಿಗೆ 11 ಪ್ರತಿಭಟನಾಕಾರರು ಬಲಿಯಾಗಿದ್ದರು. ಒಬ್ಬ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕೂಡ ಮೃತಪಟ್ಟಿದ್ದರು.
ಬಳಿಕ ಬೆಟ್ಟ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ಆರೋಪದ ಮೇಲೆ ಗುರುಂಗ್ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದಾದ ಬಳಿಕ, ಗುರುಂಗ್ ನವದೆಹಲಿ, ಸಿಕ್ಕಿಂ, ನೇಪಾಳ ಮತ್ತು ಜಾರ್ಖಂಡ್ನಲ್ಲಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗ್ತಿದೆ.
ಹೀಗೆ, ಮೂರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಬಿಮಲ್ ಗುರುಂಗ್, ಕಳೆದ ಅಕ್ಟೋಬರ್ 21ರಂದು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಗುರುಂಗ್ ಮತ್ತೆ ಡಾರ್ಜಿಲಿಂಗ್ ಪ್ರವೇಶ ಮಾಡಿರುವುದು, ಟಿಎಂಸಿ ಮತ್ತು ಬಿಜೆಪಿ ಪಕ್ಷಗಳ ತಲೆ ಬಿಸಿ ಮಾಡಿದೆ. ಕಾರಣ ಗುರುಂಗ್ ಡಾರ್ಜಿಲಿಂಗ್‌ನ ಬಹು ಸಂಖ್ಯಾಂತ ಪಂಗಡ ಪ್ರತಿನಿಧಿಸುವ ಗೂರ್ಖಾ ಜನಮುಕ್ತಿ ಮೋರ್ಚಾದ ಪ್ರಬಲ ನಾಯಕ. 2007ರಿಂದ ಗೂರ್ಖಾ ಜನಮುಕ್ತಿ ಮೋರ್ಚಾ ಬಿಜೆಪಿಯನ್ನು ಬೆಂಬಲಿಸುತ್ತಿತ್ತು.
ಇದರಿಂದಾಗಿಯೇ, ಬಿಜೆಪಿ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರವನ್ನು ಸತತ ಮೂರು ಬಾರಿ ಗೆದ್ದಿತ್ತು. ಆದರೆ, ಮೂರು ವರ್ಷಗಳ ನಂತರ ಮತ್ತೆ ಪ್ರತ್ಯಕ್ಷವಾದ ಗುರುಂಗ್, ಬಿಜೆಪಿ ನಮ್ಮ ಪತ್ಯೇಕ ರಾಜ್ಯ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಿಲ್ಲ, ನಾವು ಇನ್ನು ಮುಂದೆ ಬಿಜೆಪಿಗೆ ಬೆಂಬಲಿಸಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.