ನವದೆಹಲಿ : ಕೇಂದ್ರ ಸರ್ಕಾರದ ನೀತಿ ಸ್ಥಗಿತಗೊಂಡಿದೆ. ಕೊರೊನಾ ವಿರುದ್ಧ ಜಯ ಸಾಧಿಸಲು ಅವರಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಭಾರತ ಸರ್ಕಾರದ ಪಾರ್ಶ್ವವಾಯುವಿಗೆ ಒಳಗಾದ ನೀತಿಯು, ವೈರಸ್ ವಿರುದ್ಧ ಜಯ ಸಾಧಿಸಲು ಸಾಧ್ಯವಿಲ್ಲ. ಫೇಸ್ ಇಟ್, ಡೋಂಟ್ ಫೇಕ್ ಇಟ್ ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಣವನ್ನು ಕೊರೊನಾ ಲಸಿಕೆ ತಯಾರಿಸುವ ಕಂಪನಿಗಳಿಗೆ ಖರ್ಚು ಮಾಡಿತ್ತು.
ಈಗ ಅದೇ ಲಸಿಕೆಯನ್ನು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವದ ಬೇರೆ ಯಾವ ದೇಶದಲ್ಲಿಯೂ ಲಸಿಕೆಗೆ ಇಷ್ಟು ಹೆಚ್ಚಿನ ವೆಚ್ಚ ಇಲ್ಲ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ತಮ್ಮ ಸ್ನೇಹಿತರಿಗಾಗಿ ಜನರನ್ನು ದೋಚುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೊರೊನಾ ಬಗ್ಗೆ ನಿಜವಾದ ಡೇಟಾವನ್ನು ಜನರಿಗೆ ತಲುಪಲು ಕೇಂದ್ರವು ಅನುಮತಿಸುವುದಿಲ್ಲ. ಪಿಎಂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸಂಗತಿಗಳನ್ನು ನಿಯಂತ್ರಿಸುತ್ತಿದೆ ಎಂದು ಅವರು ಟ್ವಿಟರ್ನಲ್ಲಿ ಆರೋಪಿಸಿದ್ದಾರೆ.