ಎರ್ನಾಕುಲಂ(ಕೇರಳ):ಪೊಲೀಸರು ದರ್ಪ, ಅಹಂಕಾರ ತೋರುತ್ತಾರೆ ಎಂಬ ಅಪವಾದವಿದೆ. ಆದರೆ, ಕೇರಳದ ಎರ್ನಾಕುಲಂ ಪೊಲೀಸರು ತೋರಿದ ಮಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಡ್ರಗ್ಸ್ ವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ಇಬ್ಬರು ಚಿಕ್ಕಮಕ್ಕಳನ್ನು ಪೊಲೀಸ್ ಠಾಣೆ ಮುಂದೆ ಬಿಟ್ಟಿದ್ದು, ಅಲ್ಲಿನ ಪೊಲೀಸರು ಎಳೆ ಕಂದಮ್ಮಗಳಿಗೆ ಹಾಲುಣಿಸಿ ಜತನ ಮಾಡಿದ್ದಾರೆ.
ಘಟನೆ ಏನು?:ಎರ್ನಾಕುಲಂನ ಪೊಲೀಸ್ ಠಾಣೆಯ ಮುಂದೆ ವ್ಯಕ್ತಿಯೊಬ್ಬ ಒಂದೂವರೆ ವರ್ಷದ ಮಕ್ಕಳಿಬ್ಬರನ್ನು ಠಾಣೆಯ ಮುಂದೆ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದ ಪೊಲೀಸ್ ಹಿಂಬಾಲಿಸಿ ಆತನನ್ನು ಹಿಡಿದು ವಿಚಾರಿಸಿದ್ದಾರೆ.
ಆತ ತಾನು ಮಗುವನ್ನು ಪೋಷಿಸಲು ಅಶಕ್ತನಾಗಿದ್ದೇನೆ. ಪತ್ನಿಯೂ ನನ್ನನ್ನು ತೊರೆದಿದ್ದಾಳೆ ಎಂದು ಅಳಲು ತೋಡಿಕೊಂಡಿದ್ದಾನೆ. ಬಳಿಕ ಆತನನ್ನು ಠಾಣೆಯಲ್ಲಿ ಕುಳ್ಳಿರಿಸಿದ್ದಾರೆ. ಈ ವೇಳೆ ಹಸಿವಿನಿಂದ ಅಳುತ್ತಿದ್ದ ಮಕ್ಕಳಿಗೆ ಅಲ್ಲಿದ್ದ ಪೊಲೀಸರು ಬಾಟಲಿಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ಎತ್ತಿಕೊಂಡು ಆಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.