ಕೊಲ್ಕತ್ತಾಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ (WBBPE) ಹೊರಗೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಅರ್ಹ ಅಭ್ಯರ್ಥಿಗಳನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ.
ಡಬ್ಲ್ಯೂಬಿಬಿಪಿಇ ಅಧ್ಯಕ್ಷರೊಂದಿಗೆ ನಡೆಸಿದ ಚರ್ಚೆ ಯಾವುದೇ ಫಲಿತಾಂಶವನ್ನು ನೀಡದ ಹಿನ್ನೆಲೆ ಅಭ್ಯರ್ಥಿಗಳು ಸಾಲ್ಟ್‌ಲೇಕ್‌ನ ಕರುಣಾಮೊಯಿಯಲ್ಲಿರುವ ಡಬ್ಲ್ಯೂಬಿಬಿಪಿಇ ಕೇಂದ್ರ ಕಚೇರಿಯಿಂದ 150 ಮೀಟರ್ ದೂರದಲ್ಲಿ ರಾತ್ರಿ ಇಡೀ ಧರಣಿ ನಡೆಸುತ್ತಿದ್ದರು.
ಟಿಇಟಿ ಅಭ್ಯರ್ಥಿಗಳ ಬಂಧನ:ಈ ಬಗ್ಗೆ ಡಬ್ಲ್ಯೂಬಿಬಿಪಿಇ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರತಿಭಟನಾಕಾರರನ್ನು ಆವರಣದಿಂದ ತಕ್ಷಣ ಹೊರಹಾಕುವಂತೆ ಮನವಿ ಸಲ್ಲಿಸಿತು. ಆದರೆ ಮಂಡಳಿ ಪರವಾಗಿ ಯಾವುದೇ ಆದೇಶ ನೀಡಲು ನ್ಯಾಯಾಲಯ ನಿರಾಕರಿಸಿದೆ. ಕೋಲ್ಕತ್ತಾಹೈಕೋರ್ಟ್ ಸೆಕ್ಷನ್ 144 ವಿಧಿಸಲು ಅನುಮತಿ ನೀಡಿದ ಕೆಲವೇ ಗಂಟೆಗಳ ನಂತರ ಈ ಪ್ರದೇಶದಲ್ಲಿ ಹೈಡ್ರಾಮ ನಡೆದಿದೆ. ಪ್ರಾಥಮಿಕ ಶಿಕ್ಷಣ ಮಂಡಳಿಯ ಕೇಂದ್ರ ಕಚೇರಿ ಬಳಿಯಿಂದ ಪೊಲೀಸರು ಸುಮಾರು 500 ಪ್ರತಿಭಟನಾಕಾರ ಗುಂಪನ್ನು ಚದುರಿಸಿ ಹಲವರನ್ನು ಬಂಧಿಸಿದ್ದಾರೆ.
ಪೊಲೀಸರಿಂದ ಬಲಪ್ರಯೋಗ: 2014ರಲ್ಲಿ ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಮೆರಿಟ್ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆರಂಭದಲ್ಲಿ ಪೊಲೀಸರು ಈ ಪ್ರದೇಶವನ್ನು ತೆರವುಗೊಳಿಸಲು ಎಚ್ಚರಿಕೆ ನೀಡಿದರು. ಆದರೆ, ಸರ್ಕಾರಿ ಮತ್ತು ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಬೋಧಕ ಹುದ್ದೆಗಳಿಗೆ ನೇಮಕಾತಿ ಪತ್ರ ಪಡೆದ ನಂತರ ಪ್ರತಿಭಟನೆ ಕೈಬಿಡುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ವೇಳೆ, ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಕೆಲವರನ್ನು ದೈಹಿಕವಾಗಿ ನಿಂದಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. "ನಮ್ಮನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದುರು. ಮಹಿಳೆಯರನ್ನೂ ಸಹ ದೈಹಿಕವಾಗಿ ನಿಂದಿಸಲಾಗಿದೆ ಎಂದು ಪ್ರತಿಭಟನಾಕಾರರಾದ ಶಿಲಾ ದಾಸ್ ಆರೋಪಿಸಿದ್ದಾರೆ.