ಭಾರಿ ಮಳೆಗೆ ಪೊಲೀಸ್ ಠಾಣೆ ಮುಳುಗಡೆ ಪಾಲಿ(ರಾಜಸ್ಥಾನ):ಉತ್ತರ ಭಾರತದಲ್ಲಿ ವರ್ಷಧಾರೆ ಜೋರಾಗಿದೆ. ಅನೇಕ ಜೀವಗಳನ್ನೂ ಬಲಿ ತೆಗೆದುಕೊಂಡಿದೆ. ರಾಜಸ್ಥಾನದಲ್ಲೂ ಮಳೆಯಾರ್ಭಟ ಜೋರಾಗಿದ್ದು, ಪಾಲಿ ಪಟ್ಟಣದ ಪೊಲೀಸ್ ಠಾಣೆ ಎರಡನೇ ಬಾರಿಗೆ ಜಲಾವೃತಗೊಂಡಿತು. ಇದರಿಂದಾಗಿ ಅಲ್ಲಿನ ಪೊಲೀಸರು ಟ್ರ್ಯಾಕ್ಟರ್ ಬಳಸಿ ಹೊರಬರಬೇಕಾಯಿತು.
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪಾಲಿ ಜಿಲ್ಲೆಯ ತಖತ್‌ಗಢ ನೀರಿನಲ್ಲಿ ಮುಳುಗಿದೆ. ಸುಮೇರ್‌ಪುರ ಉಪವಿಭಾಗ ವ್ಯಾಪ್ತಿಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ನೀರಿನ ಮೂಲಗಳು ತುಂಬಿ ಹರಿಯುತ್ತಿವೆ. ಕೆಲವೇ ದಿನಗಳಲ್ಲಿ ಪಾಲಿ ಜಿಲ್ಲೆಯ ತಖತ್‌ಗಢ ವ್ಯಾಪ್ತಿಯ ಪೊಲೀಸ್ ಠಾಣೆ 2ನೇ ಬಾರಿಗೆ ಮುಳುಗಡೆ ಕಂಡಿದೆ.
ಬಂಕ್ಲಿ ಅಣೆಕಟ್ಟೆ ಭರ್ತಿ:ನಿರಂತರ ವರುಣಾರ್ಭಟದಿಂದಾಗಿ ಬಂಕ್ಲಿ ಅಣೆಕಟ್ಟೆ ಉಕ್ಕಿ ಹರಿದಿದೆ. ಡ್ಯಾಮ್ನಿಂದ ನೀರು ಬಿಟ್ಟ ಕಾರಣ ಪಾಲಿ ಪಟ್ಟಣಕ್ಕೆ ನೀರು ನುಗ್ಗಿದೆ. ಪ್ರಮುಖ ಮಾರುಕಟ್ಟೆಗಳು ಮತ್ತು ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳು ನೀರಿನಿಂದ ಆವೃತವಾಗಿವೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು ಸಹ ಜಿಲ್ಲಾ ಕೇಂದ್ರದ ಸಂಪರ್ಕ ಕಳೆದುಕೊಂಡಿವೆ. ಜೂನ್ 18ರ ನಂತರ ಮತ್ತೊಮ್ಮೆ ಪಟ್ಟಣದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಜಲೋರ್ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದು ಪಕ್ಕದ ಪಾಲಿ ಮತ್ತು ಸಿರೋಹಿ ಜಿಲ್ಲೆಗಳಲ್ಲಿ ಅದರ ಪರಿಣಾಮಗಳು ಉಂಟು ಮಾಡುತ್ತಿದೆ. ಕುಲ್ತಾನ ನದಿಗೆ ನೀರು ಬಂದಿದ್ದರಿಂದ ಜಾಲೋರ್-ರೋಹಿತ್ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಜವಾಯಿ ನದಿಯಲ್ಲಿ ನೀರಿನ ಹರಿವು ನಿರಂತರವಾಗಿ ಹೆಚ್ಚುತ್ತಿದೆ. ಅಕೋಲಿ ನದಿ ಆರ್ಭಟಿಸುತ್ತಿರುವ ಕಾರಣ ಜಲೋರ್- ರಾಮ್ಸಿನ್ ರಸ್ತೆಯನ್ನು ಬಂದ್ ಮಾಡಲಾಗಿದೆ.
ದೋಣಿ, ಟ್ರ್ಯಾಕ್ಟರ್ ಮೂಲಕ ಗಸ್ತು:ಪಾಲಿ ಜಿಲ್ಲೆಯಾದ್ಯಂತ 128 ಮಿ.ಮೀ ಮಳೆಯಾಗಿದೆ. ಜೋಗ್ದಾವಾಸ್‌ನಲ್ಲಿ 75 ಮಿ.ಮೀ ಮತ್ತು ಬಾಲಿ ಉಪವಿಭಾಗದಲ್ಲಿ 67 ಮಿ.ಮೀ ಮಳೆ ದಾಖಲಾಗಿದೆ. ಇದರಿಂದಾಗಿ ತಖತ್‌ಗಢ ಪೊಲೀಸ್ ಠಾಣೆ ನೀರಿನಿಂದ ತುಂಬಿಕೊಂಡಿದ್ದು, ಠಾಣೆಯೊಳಗೆ ಮೂರು ಅಡಿ ನೀರು ನಿಂತಿದೆ. ಪೊಲೀಸರು ಗ್ರಾಮಸ್ಥರ ಸಹಾಯದಿಂದ ದೋಣಿ ಮತ್ತು ಟ್ರ್ಯಾಕ್ಟರ್ ಸಹಾಯದಿಂದ ಗಸ್ತು ತಿರುಗುತ್ತಿರುವುದು ಕಂಡುಬಂತು. ಪೊಲೀಸ್ ಠಾಣೆಯಲ್ಲಿ ಬಂಧಿತ ಆರೋಪಿಯನ್ನು ಬೋಟ್‌ನಿಂದ ಕರೆದೊಯ್ದು, ಬಳಿಕ ಆತನನ್ನು ಟ್ರ್ಯಾಕ್ಟರ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಳೆ ನಿಂತಿದ್ದರೂ ಪ್ರವಾಹ ತಗ್ಗದ ಕಾರಣ ಪೊಲೀಸ್ ಠಾಣೆ ಕೆರೆಯಂತಾಗಿದೆ. ಮತ್ತೊಂದೆಡೆ ಪಟ್ಟಣದ ರಸ್ತೆಗಳು ಚರಂಡಿ ನೀರಿನಿಂದ ಕಟ್ಟಿಕೊಂಡಿವೆ. ಜಿಲ್ಲೆಯ ಸೋಜತ್ ಪಟ್ಟಣದಲ್ಲಿ ದುರಂತ ಸಂಭವಿಸಿದ್ದು, ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ. ವಿದ್ಯುತ್ ತಂತಿ ದುರಸ್ತಿ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಉತ್ತರ ಭಾರತದಲ್ಲಿ ಮಳೆಯ ರುದ್ರನರ್ತನ; 39ಕ್ಕೂ ಹೆಚ್ಚು ಮಂದಿ ಸಾವು, ಹಿಮಾಚಲದಲ್ಲಿ ಜಲಪ್ರಳಯ!