ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ, ಪಂಜಾಬ್‌ನಲ್ಲಿ ಇಂದಿನಿಂದ ರೈತರ ರೈಲ್ ರೋಕೋ ಚಳವಳಿ ಹಮ್ಮಿಕೊಂಡಿದ್ದು, ಇದರಲ್ಲಿ ಖಲಿಸ್ತಾನಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆಗಳು ಅಲರ್ಟ್ ಘೋಷಿಸಿವೆ.
ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿನ ಫ್ಲೈಓವರ್ ಮೇಲೆ ಖಲಿಸ್ತಾನ್ ಪರ ಘೋಷಣೆಗಳು ಬರೆಯಲಾಗಿದೆ. ಸೆಪ್ಟೆಂಬರ್ 27ರಂದು ಇದರ ವಿಡಿಯೋ ಬಯಲಾಗಿದ್ದು, ಇದರ ಆಧಾರದ ಮೇಲೆ ಶೋಧ ಆರಂಭಿಸಿದಾಗ ಸೀಲಂಪುರದಿಂದ ಕಾಶ್ಮೀರಿ ಗೇಟ್ ಬರುವ ಫ್ಲೈಓವರ್ನ ಗೋಡೆ ಮೇಲೆ ಖಲಿಸ್ತಾನ್ ಪರ ಬರಹಗಳು ಪತ್ತೆಯಾಗಿವೆ. ಈ ಸಂಬಂಧ ಗುರುವಾರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಲಾಗಿದೆ ಎಂದು ಉತ್ತರ ದೆಹಲಿ ಜಿಲ್ಲೆಯ ಹೆಚ್ಚುವರಿ ಡಿಸಿಪಿ ತಿಳಿಸಿದ್ದಾರೆ.
ಸದ್ಯ ಕಾಶ್ಮೀರಿ ಗೇಟ್ ಬಳಿಯ ಆಕ್ಷೇಪಾರ್ಹ ಘೋಷಣೆಯನ್ನು ಪೊಲೀಸರು ಅಳಿಸಿ ಹಾಕಿದ್ದಾರೆ. ಈ ಹಿಂದೆಯೂ ದೆಹಲಿಯ ಅನೇಕ ಸ್ಥಳಗಳಲ್ಲಿ ಖಲಿಸ್ತಾನ್ ಪರ ಘೋಷಣೆಗಳು ಪತ್ತೆಯಾಗಿದ್ದವು. ಇತ್ತೀಚೆಗಷ್ಟೇ ಪೀರಗರ್ಹಿ ಪ್ರದೇಶದ ಮೆಟ್ರೋ ನಿಲ್ದಾಣದ ಬಳಿ ಇದೇ ರೀತಿಯಾಗಿ ಬರೆಯಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ ಕೆಲ ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ:Khalistan:'ದೆಹಲಿ ಖಲಿಸ್ತಾನ್ ಆಗುತ್ತೆ'.. ಜಿ20 ಸಭೆ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಖಲಿಸ್ತಾನಿ ಉಗ್ರರ ಪುಂಡಾಟದ ಬರಹ
ರೈಲ್ ರೋಕೋ ಚಳವಳಿಯಲ್ಲಿ ಭಾಗಿ ಸಾಧ್ಯತೆ: ಪಂಜಾಬ್‌ನಲ್ಲಿ ವಿವಿಧ ರೈತ ಸಂಘಟನೆಗಳು ಸೆಪ್ಟೆಂಬರ್ 28ರಿಂದ 30ರವರೆಗೆ ರೈಲ್ ರೋಕೋ ಚಳವಳಿಯನ್ನು ಆಯೋಜಿಸಲಿವೆ. ರೈತರ ಈ ಆಂದೋಲನದಲ್ಲಿ ಖಲಿಸ್ತಾನಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡಬಹುದು ಎಂಬ ಆತಂಕವೂ ಮೂಡಿದೆ. ಆದ್ದರಿಂದ ರೈಲ್ವೆ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆಗಳು ಈಗಾಗಲೇ ಅಲರ್ಟ್ ಆಗಿವೆ.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಇತರ ರಾಜ್ಯಗಳ ರೈತರು ಪಂಜಾಬ್‌ನಲ್ಲಿ ಇಂದಿನಿಂದ ಸೆಪ್ಟೆಂಬರ್ 30ರವರೆಗೆ ರೈಲ್ ರೋಕೋ ಆಂದೋಲನವನ್ನು ನಡೆಸುವುದಾಗಿ ಘೋಷಿಸಿದ್ದಾರೆ. ರೈಲ್ವೆ ಭದ್ರತಾ ಮೂಲಗಳ ಮಾಹಿತಿ ಪ್ರಕಾರ, ಖಲಿಸ್ತಾನಿಗಳು ಭಾಗಿ ಸಾಧ್ಯತೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು ಎರಡು ದಿನಗಳಿಂದ ಪಂಜಾನ್ನಲ್ಲಿದ್ದು, ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದಾರೆ. ಖಲಿಸ್ತಾನಿ ಭಯೋತ್ಪಾದಕರ ಪತ್ತೆಗಾಗಿ ದೆಹಲಿಯ ವಿವಿಧೆಡೆ ಹಲವು ಪೋಸ್ಟರ್‌ಗಳನ್ನೂ ಅಂಟಿಸಲಾಗಿದೆ.
ಈ ಹಿಂದೆ ರೈತರ ಆಂದೋಲನ ಸಂದರ್ಭದಲ್ಲಿ ಖಲಿಸ್ತಾನ್ ಬೆಂಬಲಿಗರು ದೆಹಲಿ ಕೆಂಪು ಕೋಟೆಯ ಮೇಲೆ ಖಲಿಸ್ತಾನಿ ಧ್ವಜವನ್ನು ಹಾರಿಸಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದೀಗ ರೈತರ ರೈಲ್ ರೋಕೋ ಚಳವಳಿಯಲ್ಲಿ ಖಲಿಸ್ತಾನಿಗಳು ಪಾಲ್ಗೊಳ್ಳುವ ಸಾಧ್ಯತೆ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆಗಾಗಿ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಕುಮಾರ್ ಹಾಗೂ ಆರ್‌ಪಿಎಫ್ ವಿಭಾಗೀಯ ಭದ್ರತಾ ಆಯುಕ್ತ ಎಸ್.ಸುಧಾಕರ್ ಅವರನ್ನು ಸಂಪರ್ಕಿಸಿದರೂ, ಪ್ರತಿಕ್ರಿಯಿಸಲಿಲ್ಲ.
ಇದನ್ನೂ ಓದಿ:ಖಲಿಸ್ತಾನಿ ಉಗ್ರ ಪನ್ನುಗೆ ಸೇರಿದ ಕೃಷಿ ಭೂಮಿ, ಮನೆ ಮುಟ್ಟುಗೋಲು ಹಾಕಿದ ಎನ್‌ಐಎ