ಕರ್ನಾಟಕ

karnataka

ಮಣಿಪುರ ಹಿಂಸಾಚಾರ: ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್‌, FIR ದಾಖಲು

By

Published : Jul 24, 2023, 12:38 PM IST

ಮಣಿಪುರದಲ್ಲಿ ಮೇ 4ರಂದು ನಡೆದ ಮಹಿಳೆಯರ ದೌರ್ಜನ್ಯ ಪ್ರಕರಣದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತ ಹಾಗು ಅವರ ಪುತ್ರನ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್ ಹಾಕಿರುವ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

FIR over social media posts
FIR over social media posts

ಇಂಫಾಲ:ಮೇ 4ರಂದು ಇಡೀ ದೇಶವೇ ತಲೆತಗ್ಗಿಸುವ ಘಟನೆ ಮಣಿಪುರದಲ್ಲಿ ನಡೆದಿದ್ದು, ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಅವರ ಮಗ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಅವರ ಚಿತ್ರವನ್ನು ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿ ಪ್ರಸಾರ ಮಾಡಿದ್ದಕ್ಕಾಗಿ ಮಣಿಪುರ ಪೊಲೀಸರು ಭಾನುವಾರ ರಾತ್ರಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಡಿಟ್​ ಮಾಡಿರುವ ಈ ಫೋಟೋವನ್ನು ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್ ಮಾಡಿದ್ದರು.

ಮಣಿಪುರ ಪೊಲೀಸ್​ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದ್ದು, ನಮ್ಮ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಈ ಕುರಿತು ದೂರು ಬಂದಿದೆ. ಈ ದೂರಿನಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತ ಮತ್ತು ಅವರ ಮಗನ ಚಿತ್ರದೊಂದಿಗೆ ಇಬ್ಬರು ಮಹಿಳೆಯರ ಮೇಲಿನ ಅಮಾನವೀಯ ದುಷ್ಕೃತ್ಯದ ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ ಅಳವಡಿಸಲಾಗಿದೆ. ಇದರೊಂದಿಗೆ ಅವರು ಅಪರಾಧದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಶೀರ್ಷಿಕೆ ಬರೆದು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೀಗಾಗಿ ದೂರಿನ ಮೇರೆಗೆ ದಾಖಲೆರಹಿತ ಆರೋಪ ಮಾಡಿ ಪ್ರತಿಷ್ಠೆಗೆ ಹಾನಿ ಮಾಡಿರುವ ಕಾರಣಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

ಅಮಾನುಷ ಕೃತ್ಯ: ಮಣಿಪುರದ ಎರಡು ಸಮುದಾಯಗಳ ನಡುವೆ ಭುಗಿಲೆದ್ದ ಗಲಭೆ ಮೇ 4ರಂದು ಅತ್ಯಂತ ಅಮಾನವೀಯ ದುಷ್ಕೃತ್ಯಕ್ಕೆ ಕಾರಣವಾಗಿತ್ತು. ದುಷ್ಕರ್ಮಿಗಳು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ್ದರು. ಪೊಲೀಸರು ದಾಖಲಿಸಿರುವ ಎಫ್​ಐಆರ್​ ಪ್ರಕಾರ, ಅಂದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೂ ಮೊದಲು ಅವರನ್ನು ಕಾಪಾಡಲು ಬಂದಿದ್ದ ಸಹೋದರನನ್ನು ಶಸ್ತ್ರಸಜ್ಜಿತ ಗುಂಪು ಹತ್ಯೆ ಮಾಡಿದೆ. ಆ ಬಳಿಕ, ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಮತ್ತು ಕಿರುಕುಳ ನೀಡಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಬಾಲಾಪರಾಧಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:Manipur Violence: ಮಣಿಪುರದಲ್ಲಿ 10 ಮನೆಗಳು, ಶಾಲೆಗೆ ಬೆಂಕಿ ಹಚ್ಚಿದ ಶಸ್ತ್ರಸಜ್ಜಿತ ಮಹಿಳಾ ಬಂಡುಕೋರರ ಗುಂಪು

ABOUT THE AUTHOR

...view details