ನವದೆಹಲಿ:ಉತ್ತರ ದೆಹಲಿಯ ಹೋಲಂಬಿ ಕಲಾನ್ ಪ್ರದೇಶದಲ್ಲಿ ಸೋಮವಾರ ಸುಮಾರು ಏಳರಿಂದ ಎಂಟು ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿವೆ. ಈ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಶಪಡಿಸಿಕೊಂಡ ಗ್ರೆನೇಡ್‌ಗಳೆಲ್ಲವೂ ದೇಶಿ ನಿರ್ಮಿತವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿಯ ಹೊರವಲಯದ ಕೃಷಿ ಭೂಮಿಯಲ್ಲಿ ಗ್ರೆನೇಡ್‌ಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಮೆಟ್ರೋ ವಿಹಾರ್ ಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ಹೊಲವೊಂದರಲ್ಲಿ 7ಕ್ಕೂ ಹೆಚ್ಚು ಮಾರಕಾಸ್ತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಡೆಸಿದ್ದರು. ಈ ವೇಳೆ ಗ್ರೆನೇಡ್‌ಗಳು ಪತ್ತೆಯಾಗಿವೆ. ತಕ್ಷಣ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರೆನೇಡ್‌ಗಳನ್ನು ಅಲ್ಲಿ ಇಟ್ಟವರು ಯಾರು? ಮತ್ತು ಏಕೆ ಅಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಈವರೆಗೆ ಯಾವುದೇ ಭಯೋತ್ಪಾದನೆ ಸಂಘಟನೆಯ ಸಂಪರ್ಕ ಪತ್ತೆಯಾಗಿಲ್ಲ. ನಮ್ಮ ತಂಡ ಹೊಳಂಬಿ ಕಲಾನ್ ಪ್ರದೇಶದಲ್ಲಿ ಗ್ರೆನೇಡ್‌ಗಳನ್ನು ಪತ್ತೆ ಮಾಡಿದ್ದು, ಈ ಸಂಬಂಧ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮೊದಲು, ದೆಹಲಿ ಪೊಲೀಸರ ವಿಶೇಷ ತಂಡ ಭಾಲ್ಸ್ವಾ ಡೈರಿ ಪ್ರದೇಶದ ಮನೆಯೊಂದರಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿತ್ತು. ಆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಏ.25, 2022 ರಂದು ದಕ್ಷಿಣ ದೆಹಲಿಯ ಮೊಹಮ್ಮದ್‌ಪುರ ಪ್ರದೇಶದಲ್ಲಿ ಹ್ಯಾಂಡ್ ಗ್ರೆನೇಡ್ ಅನ್ನು ಹೋಲುವ ಬಾಂಬ್ ಮಾದರಿಯ ಅನುಮಾನಾಸ್ಪದ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಾಂಬ್ ನಿಷ್ಕ್ರಿಯ ದಳ ವಸ್ತುವನ್ನು ಪರಿಶೀಲಿಸಿದಾಗ ಅದು ಹಳೆಯ ಹ್ಯಾಂಡ್ ಗ್ರೆನೇಡ್‌ನ ಖಾಲಿ ಶೆಲ್ ಎಂದು ತಿಳಿದು ಬಂದಿತ್ತು. ಅಲ್ಲದೇ ಸೀಮಾಪುರಿ ಪ್ರದೇಶದ ಮನೆಯೊಂದರಲ್ಲಿ ಸ್ಫೋಟಕಗಳನ್ನು ಬಚ್ಚಿಟ್ಟಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು.
ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ ಉಗ್ರರು:ಹೈದರಾಬಾದ್‌ನಲ್ಲಿ ಬಂಧಿತ ಮೂವರು ಭಯೋತ್ಪಾದಕರು ಹ್ಯಾಂಡ್ ಗ್ರೆನೇಡ್ಗಳ ಮೂಲಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಇತ್ತೀಚೆಗೆ ಎನ್‌ಐಎ ಹೇಳಿತ್ತು. ಇವರಿಗೆ ಪಾಕಿಸ್ತಾನದ ಹ್ಯಾಂಡ್ಲರ್ಗಳಿಂದ ಗ್ರೆನೇಡ್ ಪೂರೈಕೆಯಾಗಿದ್ದವು ಎಂದು ತನಿಖೆಯಿಂದ ಗೊತ್ತಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಾದ ಮೊಹಮ್ಮದ್ ಜಾಹೇದ್, ಮಾಜ್ ಹಸನ್ ಫಾರೂಕ್ ಮತ್ತು ಸಮಿಯುದ್ದೀನ್ ಇವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಬಂಧಿತ ಉಗ್ರರು ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದರು: ಎನ್‌ಐಎ