ಕಣ್ಣೂರ (ಕೇರಳ): ಶುಕ್ರವಾರದ ನಮಾಜ್ ನಂತರ ಮಸೀದಿಯಲ್ಲಿ ದ್ವೇಷ ಭಾಷಣ ಮಾಡದಂತೆ ಮಸೀದಿ ಕಮಿಟಿಗೆ ನೋಟಿಸ್ ನೀಡಿದ್ದ ಉತ್ತರ ಕೇರಳ ಭಾಗದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಒಬ್ಬರನ್ನು ಕೇರಳ ಸರ್ಕಾರ ವರ್ಗಾವಣೆ ಮಾಡಿದೆ.
ಬಿಜೆಪಿಯ ಮಾಜಿ ವಕ್ತಾರರಿಬ್ಬರು ಪ್ರವಾದಿ ಮಹಮ್ಮದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಏರ್ಪಟ್ಟಿರುವ ತ್ವೇಷಮಯ ವಾತಾವರಣದ ಹಿನ್ನೆಲೆಯಲ್ಲಿ ಇನ್ಸಪೆಕ್ಟರ್ ಇಂಥದ್ದೊಂದು ನೋಟಿಸ್ ನೀಡಿದ್ದರು ಎನ್ನಲಾಗಿದೆ.
ಪ್ರಕರಣವೇನು?: ಮಯ್ಯಿಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿದ್ದ ಬಿಜು ಪ್ರಕಾಶ ಎಂಬುವರು ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯಲ್ಲಿ ದ್ವೇಷ ಭಾಷಣ ಮಾಡಕೂಡದು ಎಂದು ಮಸೀದಿ ಕಮಿಟಿಗೆ ನೋಟಿಸ್ ನೀಡಿದ್ದರು. ಪ್ರದೇಶದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದರು. ಆದರೆ ಸಮ್ಸಾಥಾ ಜಮಾಯುತುಲ್ ಉಲೇಮಾ ಸಂಘಟನೆ ಸೇರಿದಂತೆ ಹಲವಾರು ಸಂಘಟನೆಗಳು ನೋಟಿಸಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಪೊಲೀಸ್ ಅಧಿಕಾರಿಯ ನೋಟಿಸ್ ತಮಗೆ ಮಾಡಿದ ಅವಮಾನ ಎಂದು ಇವರು ಆಕ್ರೋಶ ವ್ಯಕ್ತಪಡಿಸಿದ್ದರು.
"ಸ್ಟೇಷನ್ ಹೌಸ್ ಆಫೀಸರ್ ರಾಜ್ಯ ಸರ್ಕಾರದ ನೀತಿಯನ್ನು ತಿಳಿದುಕೊಳ್ಳದೆ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಡಿಜಿಪಿ ಯವರು ಅವರನ್ನು ಆ ಸ್ಥಳದಿಂದ ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದಾರೆ." ಎಂದು ಕೇರಳ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಸ್ಲಿಂ ಲೀಗ್ ಹಾಗೂ ಎಸ್ಡಿಪಿಐ ನೋಟಿಸ್ ನೀಡಿದ್ದನ್ನು ಖಂಡಿಸಿವೆ. ನೋಟಿಸ್ ನೀಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಲೀಗ್ ಆಗ್ರಹಿಸಿದೆ. ಸುನ್ನಿ ಮಹಲ್ ಫೆಡರೇಶನ್ ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದೆ.