ನಾಂದೇಡ್(ಮಹಾರಾಷ್ಟ್ರ):ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಗೋರಕ್ಷರನ್ನು ಅರೆಬೆತ್ತಲೆ ಮಾಡಿ ಮನಬಂದಂತೆ ಥಳಿಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆ 4 ದಿನಗಳ ಹಿಂದೆ ನಡೆದಿದೆ. ಯುವಕರನ್ನು ನಿರ್ದಯವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಫೆಬ್ರವರಿ 1 ರಂದು ಜಾನುವಾರುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನವನ್ನು ಗೋರಕ್ಷರನ್ನು ತಡೆದು ಪ್ರಶ್ನಿಸಿದ್ದರು. ಈ ವೇಳೆ ಗಲಾಟೆ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದವರು ಗೋರಕ್ಷರ ವಿರುದ್ಧ ದೂರು ನೀಡಿದ್ದರು.
ಜಾನುವಾರು ಸಾಗಣೆ ವೇಳೆ ಗಲಾಟೆ:ಇಸ್ಲಾಪುರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ರಘುನಾಥ ಶೆವಾಲೆ ಪ್ರಕರಣ ದಾಖಲಿಸಿಕೊಳ್ಳದೇ ಯುವಕರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ವಾಹನ ತಡೆದು ಗಲಾಟೆ ನಡೆಸಿದ ಬಗ್ಗೆ ಕೇಳಿದಾಗ ಯುವಕರು ಅಕ್ರಮವಾಗಿ ಜಾನುವಾರು ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಇದಕ್ಕೆ ಸುಮ್ಮನಾಗದ ಅಧಿಕಾರಿ ಯುವಕರನ್ನು ಠಾಣೆಯಲ್ಲೇ ಅರೆಬೆತ್ತಲೆಗೊಳಿಸಿದ್ದಾರೆ. ಬಳಿಕ ಯಾವುದೇ ಕೇಸ್ ದಾಖಲಿಸಿಕೊಳ್ಳದಿದ್ದರೂ, ಅವರನ್ನು ನಿರ್ದಯವಾಗಿ ಥಳಿಸಿದ್ದಾರೆ. ಇಷ್ಟಕ್ಕೇ ಬಿಡದ ಅಧಿಕಾರಿ ಗೋರಕ್ಷರನ್ನು ಠಾಣೆಯಲ್ಲೇ ಕೂರಿಸಿಕೊಂಡು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೆಲ್ಲಾ ಅಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಥಳಿಸುತ್ತಿರುವ ವಿಡಿಯೋ ವೈರಲ್:ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸ್ ಅಧಿಕಾರಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇಸ್ ದಾಖಲಿಸದೇ ಕಾನೂನುಬಾಹಿರವಾಗಿ ಯುವಕರ ಮೇಲೆ ದೌರ್ಜನ್ಯ ಎಸಗಿರುವುದು ಅಕ್ಷಮ್ಯ. ಅವರನ್ನು ಅಮಾನತು ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ವಿಡಿಯೋ ಗಮನಿಸಿದ ಉನ್ನತ ಪೊಲೀಸ್ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಅದರಂತೆ ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಘಟನೆಯ ಬಗ್ಗೆ ಪ್ರಾಥಮಿಕ ತನಿಖೆಗೂ ಆದೇಶಿಸಿದ್ದಾರೆ. ಇಷ್ಟಾದರೂ ಪೊಲೀಸ್ ಅಧಿಕಾರಿಯ ವಿರುದ್ಧ ಯುವಕರು ದೂರು ನೀಡಿಲ್ಲ. ಥಳಿಸಿಕೊಂಡ ಕೆಲ ಗೋರಕ್ಷರು ಗಾಯಗೊಂಡಿದ್ದು, ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಗೋರಕ್ಷರು ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕರು, ಮಾನವ ಹಕ್ಕುಗಳ ಆಯೋಗ, ಗೃಹ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಲಾರಿಯ ಮೇಲ್ಭಾಗದಲ್ಲಿ ಮೂಟೆಗಳನ್ನಿಟ್ಟುಕೊಂಡು ಅದರೊಳಗೆ 8 ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ರಾಜ್ಯದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಈಚೆಗೆ ಬಂಧಿಸಲಾಗಿತ್ತು. ಲಾರಿ ಸುತ್ತಲೂ ತಾಡಪತ್ರೆಯಿಂದ ಪ್ಯಾಕ್ ಮಾಡಿ ಒಳಗೆ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಯಾವುದೇ ಅಧಿಕೃತ ಪರವಾನಗಿ ಹೊಂದದೇ ಲಾರಿಯೊಂದನ್ನು ತಾಡಪತ್ರೆಯಲ್ಲಿ ಪ್ಯಾಕ್ ಮಾಡಿಕೊಂಡು ತೆರಳುತ್ತಿರುವಾಗ ಹೊನ್ನಾವರದಲ್ಲಿ ಪೊಲೀಸರು ತಡೆದಿದ್ದರು. ಅಲ್ಲದೇ ಲಾರಿ ಪ್ಯಾಕಿಂಗ್ ಬಗ್ಗೆ ಅನುಮಾನಗೊಂಡ ಪೊಲೀಸರು ತೆರೆದು ನೋಡಿದಾಗ ಅದರಲ್ಲಿ 5 ಕೋಣ ಮತ್ತು 3 ಗೂಳಿಗಳನ್ನು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಓದಿ:ಅತ್ಯಾಚಾರ ಎಸಗಿದ್ದ ಅಪ್ರಾಪ್ತೆಯನ್ನು ಮದುವೆಯಾದ ಆರೋಪಿ ವಿರುದ್ಧದ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್