ಹೈದರಾಬಾದ್:ಕೇಂದ್ರ ಸರ್ಕಾರವು ಗರಿಷ್ಠ ವಯೋಮಿತಿಯನ್ನು ಇಳಿಕೆ ಘೋಷಣೆ ಮಾಡಿದ ನಂತರ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಆಂದೋಲನಕಾರರು ಅವಾಂತರ ಸೃಷ್ಟಿಸಿದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿ ಪ್ರಕಾರ, ಬಿಹಾರದಲ್ಲಿ ಮಾಡಿದಂತೆ ಬೋಗಿಗಳನ್ನು ಸುಡಲು ಸಂಚು ರೂಪಿಸಲಾಗಿತ್ತು. ಇದಕ್ಕೆ ಖಾಸಗಿ ತರಬೇತಿ ಕೇಂದ್ರಗಳು ಪ್ರಚೋದನೆ ನೀಡಿವೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಇದೇ ವೇಳೆ ರೈಲ್ವೆ ನಿಲ್ದಾಣದ ಮೇಲೆ ದಾಳಿಗೆ ಖಾಸಗಿ ತರಬೇತಿ ಅಕಾಡೆಮಿಯೊಂದರ ಡಿಫೆನ್ಸ್ ಅಕಾಡೆಮಿ ನಿರ್ದೇಶಕರ ಪಾತ್ರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಕ್ಷಣಾ ಅಕಾಡೆಮಿಯ ನಿರ್ವಾಹಕರು ಯುವಕರನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರೇರೇಪಿಸಿದ್ದಾರೆ ಎಂದು ಸಿಕಂದರಾಬಾದ್ ರೈಲ್ವೆ ಪೊಲೀಸರು ಹೇಳಿದ್ದಾರೆ.
ಕೆಲವು ಅಕಾಡೆಮಿಗಳು ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಬಿಹಾರದಲ್ಲಿ ನಡೆದ ಗಲಭೆಗಳ ಕ್ಲಿಪ್‌ಗಳನ್ನು ಪೋಸ್ಟ್ ಮಾಡಿವೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಇಂತಹ ವಿಡಿಯೋಗಳಿಂದ ಸೇನಾ ಆಕಾಂಕ್ಷಿಗಳು ಪ್ರಚೋದನೆಗೆ ಒಳಗಾಗಿ ಜೂನ್ 17 ರಂದು ರೈಲು ನಿಲ್ದಾಣದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿದರು ಎಂದು ಡಿಮಾಂಡ್ ವರದಿಯಲ್ಲಿ ಹೇಳಲಾಗಿದೆ.
ರಿಮಾಂಡ್ ವರದಿಯಲ್ಲಿ ಇರುವುದೇನು?:ಇದಲ್ಲದೇ ಅಗ್ನಿಪಥ್ ಯೋಜನೆ ಜಾರಿಗೆ ಬಂದರೆ ರಕ್ಷಣಾ ತರಬೇತಿ ಅಕಾಡೆಮಿಗಳು ಬಾಗಿಲು ಮುಚ್ಚುತ್ತವೆ ಎಂಬ ಭೀತಿ ಹಿನ್ನೆಲೆಯಲ್ಲಿ ಅಕಾಡೆಮಿಗಳು ಹೋರಾಟಕ್ಕೆ ತಿದಿ ಒತ್ತಿದ್ದಾರೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೀಗಾಗಿಯೇ ರೈಲ್ವೇ ಸ್ಟೇಷನ್ ಬ್ಲಾಕ್, ಇಂಡಿಯನ್ ಆರ್ಮಿ ಗ್ರೂಪ್, ಹಕಿಂಪೇಟ್ ಆರ್ಮಿ ಸೋಲ್ಜರ್ಸ್ ಗ್ರೂಪ್, ಚಲೋ ಸಿಕಂದರಾಬಾದ್ ಎಆರ್‌ಒ 3 ಗ್ರೂಪ್, ಆರ್ಮಿ ಜಿಪಿ 2021 ಮಾರ್ಚ್ ರ‍್ಯಾಲಿ ಗ್ರೂಪ್ ಮತ್ತು ಸಿಇಇ ಸೋಲ್ಜರ್ಸ್ ಗ್ರೂಪ್‌ನಂತಹ ಹಲವಾರು ವಾಟ್ಸ್ಆ್ಯಪ್ ಗುಂಪುಗಳನ್ನು ಸ್ಥಾಪಿಸಲಾಗಿತ್ತು. ಅಗ್ನಿಪಥ್ ಮೂಲಕ ಅಗ್ನಿವೀರರ ನೇಮಕಾತಿಯನ್ನು ವಿರೋಧಿಸುವ ಸಂದೇಶಗಳನ್ನು ಈ ಗುಂಪುಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ರಿಮಾಂಡ್ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರತಿಭಟನಾಕಾರರು ಮಾಡಿದ್ದೇನು?:ಪ್ರತಿಭಟನಾಕಾರರು ಲೊಕೊಮೊಟಿವ್ ಇಂಜಿನ್ಗಳನ್ನು ಸುಡಲು ಪ್ರಯತ್ನಿಸಿದರು. ಇದು ಪೊಲೀಸರನ್ನು ಗುಂಡು ಹಾರಿಸಲು ದಾರಿ ಮಾಡಿಕೊಟ್ಟಿತು ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಗುಂಡಿನ ದಾಳಿಯಲ್ಲಿ ದಾಮೆರ ರಾಕೇಶ್ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಮರೆಡ್ಡಿ ಜಿಲ್ಲೆಯ ಎಲ್ಲರೆಡ್ಡಿ ನಿವಾಸಿ ಮಧುಸೂದನ್ ಪ್ರತಿಭಟನೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರೆಲ್ಲ 20 ವಯಸ್ಸಿನವರು:ಪ್ರತಿಭಟನಾಕಾರರ ಬಳಿಯಿದ್ದ ಸುಮಾರು 43 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ವರದಿ ತಯಾರಿಸಿದ್ದಾರೆ. ವಿಧ್ವಂಸಕ ಕೃತ್ಯದಿಂದ 20 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈಗಾಗಲೇ 45 ಮಂದಿಯನ್ನು ಬಂಧಿಸಿ ಕಸ್ಟಡಿಗೆ ಕಳುಹಿಸಲಾಗಿದೆ. ಇನ್ನು 11 ಮಂದಿ ಪರಾರಿಯಾಗಿದ್ದಾರೆ. ಬಹುತೇಕ ಆರೋಪಿಗಳು 20ರ ಆಸುಪಾಸಿನವರು.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬುದರ ಕುರಿತು ರಕ್ಷಣಾ ಅಕಾಡೆಮಿಯ ಉಸ್ತುವಾರಿಯ ವಿವರಗಳನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಂಗಾರೆಡ್ಡಿ, ಕರೀಂನಗರ, ಖಮ್ಮಂ ಮತ್ತು ವಾರಂಗಲ್ ಜಿಲ್ಲೆಗಳ ರಕ್ಷಣಾ ಅಕಾಡೆಮಿಗಳ ಪ್ರತಿನಿಧಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಅವರು ಗುರುತಿಸಿದ್ದಾರೆ. ವಿವಿಧ ಜಿಲ್ಲೆಗಳ ಸುಮಾರು 1,500 ಯುವಕರನ್ನು ಸಿಕಂದರಾಬಾದ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ಬಂಧಿಸಲಾಗಿದೆ.