ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ಗೆ ಜ್ಞಾಪಕ ಪತ್ರ ಹಸ್ತಾಂತರಿಸಲು ನವದೆಹಲಿಗೆ ತಲುಪಿದ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ಮತ್ತು ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಲ್ಜಿ ಭೇಟಿಯಾಗಲು ಬಂದ ಯದುವೀರ್ ಸಿಂಗ್ ವಶಕ್ಕೆ ಪಡೆದ ಪೊಲೀಸ್..! ಸಿವಿಲ್ ಲೈನ್ಸ್ ಮೆಟ್ರೋ ನಿಲ್ದಾಣದ ಹೊರಗೆ ಸಿಂಗ್ರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮುನ್ನ ಪ್ರತಿಕ್ರಿಯಿಸಿರುವ ಯದುವೀರ್ ಸಿಂಗ್, ನಾನು ಶಾಂತಿಯುತವಾಗಿ ಎಲ್ಜಿ ಅವರನ್ನು ಭೇಟಿ ಮಾಡಲು ಬಂದಿದ್ದೆ ಎಂದರು.
ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳನ್ನು ಪೂರೈಸಿದೆ. ಈ ಹಿನ್ನೆಲೆ ರಾಷ್ಟ್ರದಾದ್ಯಂತದ ರೈತರು ರಾಷ್ಟ್ರಪತಿಗೆ ಜ್ಞಾಪಕ ಪತ್ರ ಸಲ್ಲಿಸಲು ರಾಜ ಭವನಕ್ಕೆ ಬರಲು ಪ್ರಯತ್ನಿಸುತ್ತಿರುವುದರಿಂದ ಎಲ್ಜಿ ಹೌಸ್ಗೆ ಭದ್ರತೆ ಹೆಚ್ಚಿಸಲಾಗಿದೆ. ವರದಿಗಳ ಪ್ರಕಾರ, ಕೆಲವು ರೈತರನ್ನು ದೆಹಲಿ ಗಡಿಯಲ್ಲಿ ತಡೆ ಹಿಡಿಯಲಾಗಿದೆ.
ಶುಕ್ರವಾರವಷ್ಟೇ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮಧ್ಯಪ್ರದೇಶದಲ್ಲಿ ಮಾತನಾಡಿ, ಕಾನೂನುಗಳ ಅಡಿಯಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧ ಎಂದು ಹೇಳಿದರು. ಈ ವಿಷಯದ ಬಗ್ಗೆ ರೈತರ ಯಾವುದೇ ಪ್ರಸ್ತಾಪವು ನನ್ನ ಬಳಿಗೆ ಬಂದರೆ, ಅದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ನಾನು ಸಿದ್ಧ ಎಂದಿದ್ದರು. ರೈತರು ಆಂದೋಲನವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಸಚಿವರು ಸಂಯುಕ್ತ ಕಿಸಾನ್ ಮೋರ್ಚಾಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ಸಿದ್ಧವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.