ಕಾಸರಗೋಡು(ಕೇರಳ) :ಕಳ್ಳರ ಬಂಧನಕ್ಕಾಗಿ ಪೊಲೀಸರು ಇನ್ನಿಲ್ಲದ ಯೋಜನೆ ರೂಪಿಸಿ ತಮ್ಮ ಖೆಡ್ಡಾಕ್ಕೆ ಕೆಡವಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಕೇರಳ ಪೊಲೀಸರು ಆರೋಪಿ ಬಂಧನಕ್ಕಾಗಿ ಆತನ ಹೆಸರಿನಲ್ಲೇ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದಾರೆ.
ಕೇರಳ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಸಲ ದರೋಡೆಕೋರನ ಬಂಧನಕ್ಕಾಗಿ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಲಾಗಿದೆ. ಕಾಸರಗೋಡಿನ ಹೊಸದುರ್ಗ ಪೊಲೀಸರು ಈ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಕಳೆದ 10 ದಿನಗಳ ಹಿಂದೆ ಮಡಿಕ್ಕಾಯಿ ಗ್ರಾಮದ ಕಳ್ಳನೋರ್ವ ಗೃಹಿಣಿ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಶೋಧಕಾರ್ಯ ನಡೆಸಿ, ಅದರಲ್ಲಿ ವಿಫಲರಾಗಿದ್ದರು. ಹೀಗಾಗಿ, ಕಳ್ಳನ ಹೆಸರಿನಲ್ಲೇ ವಾಟ್ಸ್‌ಆ್ಯಪ್ ಗ್ರೂಪ್ ರಚಿಸುವ ಆಲೋಚನೆ ಮಾಡಿದ್ದಾರೆ.