ಬಸ್ತಿ(ಉತ್ತರ ಪ್ರದೇಶ):ಪೊಲೀಸ್ ಸಬ್ ಇನ್ಸ್ಪೆಕ್ಟರ್ವೊಬ್ಬರು ಅತಿವೇಗವಾಗಿ ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ಡಿಕ್ಕಿ ಹೊಡೆದು 25 ವರ್ಷದ ಪೊಲೀಸ್ ಕಾನ್ಸ್ಟೆಬಲ್ ಮೃತಪಟ್ಟಿರುವ ಘಟನೆ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾನ್ಸ್ಟೆಬಲ್ ಬಲ್ವಂತ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿದ್ದು, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಎಸ್‌ಐ ರಾಮ್ ಸ್ವರೂಪ್ ಚೌಹಾಣ್ ಅವರ ತಲೆಗೂ ಸಹ ಗಂಭೀರ ಗಾಯಗಳಾಗಿದ್ದು, ಗೋರಖ್‌ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಸಮಯದಲ್ಲಿ ಚೌಹಾಣ್ ಮದ್ಯ ಸೇವಿಸಿದ್ದರು ಎಂದು ಕುಮಾರ್ ಕುಟುಂಬ ಆರೋಪಿಸಿದೆ. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಹಾಗೂ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಬಸ್ತಿ ಗೋಪಾಲ್ ಚೌಧರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆರೋಪಿ ಚೌಹಾಣ್ ವಿರುದ್ಧ ಐಪಿಸಿ 304 ಎ (ನಿರ್ಲಕ್ಷ್ಯದಿಂದ ಸಾವು), 337 (ಉದ್ದೇಶಪೂರಿತ ಕೃತ್ಯ), 338 (ಗಂಭೀರ ಗಾಯ) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
2020ರ ಬ್ಯಾಚ್‌ನ ಕಾನ್ಸ್ಟೆಬಲ್ ಬಲ್ವಂತ್ ಅವರು ಬಸ್ತಿಯಲ್ಲಿರುವ ಗೌರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಡಿಯೋರಿಯಾ ಪೊಲೀಸ್ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನವರಾತ್ರಿ ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದರು.