ಕರ್ನಾಟಕ

karnataka

ETV Bharat / bharat

'ಜನರ ದಾರಿ ತಪ್ಪಿಸುವ ಸುಳ್ಳು ಮಾಹಿತಿ' ಆರೋಪ: ರಾಮದೇವ್ ವಿರುದ್ಧ ದೂರು ದಾಖಲಿಸಿದ ಐಎಂಎ - ಪಶ್ಚಿಮ ಬಂಗಾಳದ ಭಾರತೀಯ ವೈದ್ಯಕೀಯ ಸಂಘ

ಅಲೋಪಥಿ ಔಷಧಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿ, ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮದೇವ್ ವಿರುದ್ಧ ಕೋಲ್ಕತ್ತಾದ ಸಿಂಥಿ ಪೊಲೀಸ್ ಠಾಣೆಯಲ್ಲಿ ಪಶ್ಚಿಮ ಬಂಗಾಳದ ಐಎಂಎ ದೂರು ದಾಖಲಿಸಿದೆ.

By

Published : May 30, 2021, 8:59 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆಧುನಿಕ ಅಥವಾ ಅಲೋಪತಿ ಔಷಧಿಗಳು ಪರಿಣಾಮಕಾರಿಯಾಗದ ಕಾರಣ ವೈದ್ಯರು ಸೇರಿದಂತೆ ಅನೇಕ ಕೋವಿಡ್-19 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ವಿರುದ್ಧ ಪಶ್ಚಿಮ ಬಂಗಾಳದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪೊಲೀಸರಿಗೆ ದೂರು ನೀಡಿದೆ.

ಕೊರೊನಾ ಸಾಂಕ್ರಾಮಿಕದ ಈ ಸಮಯದಲ್ಲಿ ಯೋಗಗುರು ರಾಮ್‌ದೇವ್ ಅವರು ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಸುಳ್ಳು ಮಾಹಿತಿಯೊಂದಿಗೆ ಗೊಂದಲ ಸೃಷ್ಟಿಸಿದ್ದಾರೆ. ಇದು ಗಂಭೀರ ಅಪರಾಧವಾಗಿದೆ ಎಂದು ಆರೋಪಿಸಿ ಬಂಗಾಳ ಐಎಂಎ, ಕೋಲ್ಕತ್ತಾದ ಸಿಂಥಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕೊರೊನಾ ವೈರಸ್​​​ಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಅಲೋಪತಿ ಔಷಧಿಗಳಿಂದ ಹೆಚ್ಚೆಚ್ಚು ರೋಗಿಗಳು ಸಾಯುತ್ತಿದ್ದಾರೆ. ಲಸಿಕೆಯ ಎರಡೂ ಡೋಸ್​ ಪಡೆದ ಬಳಿಕವೂ 10,000ಕ್ಕೂ ಹೆಚ್ಚು ವೈದ್ಯರು ಮೃತಪಟ್ಟಿದ್ದಾರೆ ಎಂಬ ಬಾಬಾರ ಆರೋಪ ಶುದ್ಧ ಸುಳ್ಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ತಾರಕಕ್ಕೇರಿದ ಐಎಂಎ ಹಾಗೂ ಬಾಬಾ ರಾಮ್​ದೇವ್ ಸಮರ: ಬಹಿರಂಗ ಚರ್ಚೆಗೆ ಆಹ್ವಾನ

ಪ್ರಕರಣ ಹಿನ್ನೆಲೆ

ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಡಿಸಿಜಿಐ ಅನುಮೋದನೆ ನೀಡಿರುವ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೂಡ ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ. ಅಲೋಪತಿ ಆಸ್ಪತ್ರೆಗಳೇ ಪತಂಜಲಿ ಆಯುರ್ವೇದ ಔಷಧಗಳನ್ನ ಬಳಸುತ್ತಿವೆ ಎಂದು ರಾಮದೇವ್ ಈ ಹಿಂದೆ ಹೇಳಿಕೆ ನೀಡಿದ್ದರು. ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಐಎಂಎ, ರಾಮದೇವ್ ಬಂಧನಕ್ಕೆ ಒತ್ತಾಯಿಸಿತ್ತು.

ಈ ಹೇಳಿಕೆಯನ್ನು ಹಿಂಪಡೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಹ ಬಾಬಾಗೆ ಪತ್ರ ಬರೆದು ಸೂಚಿಸಿದ್ದರು. ಬಂಧನಕ್ಕೆ ಐಎಂಎ ಆಗ್ರಹಿಸಿದ ಬೆನ್ನಲ್ಲೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಅಲೋಪಥಿ ಶಾಶ್ವತ ಪರಿಹಾರವನ್ನು ನೀಡುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ ಐಎಂಎ ಹಾಗೂ ಫಾರ್ಮಾ ಕಂಪನಿಗಳಿಗೆ ಬಾಬಾ​ 25 ಪ್ರಶ್ನೆಗಳನ್ನು ಕೇಳಿದ್ದರು.

ಇದನ್ನೂ ಓದಿ: ಅಲೋಪತಿ ವೈದ್ಯಕೀಯ ಟೀಕೆ : ಬಾಬಾ ರಾಮ್​ದೇವ್​ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್!

ಹೀಗೆ ಮತ್ತೆ ಪ್ರಶ್ನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಐಎಂಎ, ತಮ್ಮ ಹೇಳಿಕೆ ಕುರಿತಂತೆ ಬಾಬಾ ರಾಮ್​ದೇವ್ 15 ದಿನದೊಳಗೆ ವಿಡಿಯೋ ಮೂಲಕ ಅಥವಾ ಲಿಖಿತವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ 1,000 ಕೋಟಿ ರೂ. ಮಾನನಷ್ಟ ಪಾವತಿಸಬೇಕು ಎಂದು ಖಡಕ್ ಎಚ್ಚರಿಕೆ ಕೂಡ ನೀಡಿತ್ತು.

ನಿನ್ನೆ ರಾಮ್​ದೇವ್​ಗೆ ಸವಾಲೆಸೆದಿದ್ದ ಉತ್ತರಾಖಂಡ್​ನ ಐಎಂಎ, ಯಾವ್ಯಾವ ಅಲೋಪತಿ ಆಸ್ಪತ್ರೆಗಳು ಚಿಕಿತ್ಸೆಗಾಗಿ ಪತಂಜಲಿ ಔಷಧಿಗಳನ್ನು ನೀಡಿವೆ? ಈ ಬಗ್ಗೆ ಮುಕ್ತ ಚರ್ಚೆಗೆ ಇಳಿಯಿರಿ ಎಂದು ಆಗ್ರಹಿಸಿದೆ.

ABOUT THE AUTHOR

...view details