ಚೆನ್ನೈ (ತಮಿಳುನಾಡು) :ಪತ್ನಿಯರ ಬದಲಿಸಿಕೊಳ್ಳುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆಘಾತಕಾರಿ ಘಟನೆಯೊಂದು ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ನವೆಂಬರ್ 4 ಮತ್ತು 5 ರಂದು ವಾರಾಂತ್ಯದಲ್ಲಿ ಚೆನ್ನೈನ ಈಸ್ಟ್ ಬೀಚ್ ರಸ್ತೆಯ ಪನೈಯೂರ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವಿವಾಹಿತ ಜೋಡಿಗಳಂತೆ ನಟಿಸಿದ ಹಲವರು ಅಕ್ರಮ ದಂಧೆಯಲ್ಲಿ ತೊಡಗಿದ್ದು ಗೊತ್ತಾಗಿದೆ.
ಎಂಟು ನಕಲಿ ದಂಪತಿ ಮತ್ತು ಹತ್ತು ವಯೋವೃದ್ಧ ವ್ಯಕ್ತಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಪತಿ - ಪತ್ನಿಯರು ಎಂದು ಹೇಳಿಕೊಂಡಿದ್ದು, ಕಾರ್ಯಕ್ರಮದಲ್ಲಿ ಮಹಿಳೆಯರು ಪ್ರಚೋದನಕಾರಿ ಬಟ್ಟೆಗಳನ್ನು ಧರಿಸಿದ್ದರು. ಇದನ್ನರಿತ ಪೊಲೀಸರು ದಾಳಿ ಮಾಡಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ತಾಂಬರಂ ನಗರ ಪೊಲೀಸ್ ಕಮಿಷನರ್ ಅಮಲರಾಜ್ ಅವರಿಗೆ ಯಾರೋ ಮಾಹಿತಿ ರವಾನಿಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಪನೈಯೂರ್ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಆಗಮಿಸಿದ್ದನ್ನು ಕಂಡು ಚಿಕ್ಕ ಚಿಕ್ಕ ಉಡುಗೆಯಲ್ಲಿದ್ದ ಮಹಿಳೆಯರು ಓಡಿಹೋಗಲು ಯತ್ನಿಸಿದರು. ಇನ್ನು ಕೆಲವರು ಕೋಣೆಯಲ್ಲಿ ಅಡಗಿಕೊಂಡರು. ಘಟನಾ ಸ್ಥಳದಲ್ಲಿ ಪೊಲೀಸರು 8 ಮಹಿಳೆಯರು ಮತ್ತು 15 ಪುರುಷರನ್ನು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.
ಫೇಸ್‌ಬುಕ್ ಪೇಜ್ ಮೂಲಕ ದಂಧೆ:ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ಮೂಲದ ಸೆಂಥಿಲ್‌ಕುಮಾರ್ ಮತ್ತು ಆತನ ಪತ್ನಿ ಈ ಕಾರ್ಯಾಚರಣೆ ಹಿಂದಿನ ರೂವಾರಿಗಳಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. 2018 ರಲ್ಲಿ 'ಸೆಬಿವೆಲ್' ಹೆಸರಿನ ಫೇಸ್‌ಬುಕ್ ಪೇಜ್ ಆರಂಭಿಸಿದ್ದರು. 'ಪತ್ನಿಯರ ಬದಲಿಸಿಕೊಳ್ಳುವ' ಜಾಹೀರಾತನ್ನು ಈ ಪುಟದಲ್ಲಿ ಹಾಕಲಾಗುತ್ತಿತ್ತು. ನೃತ್ಯ, ಮದ್ಯಪಾನ ಪಾರ್ಟಿಗಳು ಮತ್ತು ಪೂಲ್‌ಸೈಡ್ ಕಾರ್ಯಮಗಳನ್ನು ಆಯೋಜನೆ ಮಾಡುವುದರ ಜೊತೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.