ಕರ್ನಾಟಕ

karnataka

ETV Bharat / bharat

ನ್ಯೂಸ್​ಕ್ಲಿಕ್ ಮೇಲೆ ಪೊಲೀಸರ ದಾಳಿ ಪತ್ರಿಕಾ ಸ್ವಾತಂತ್ರ್ಯದ ಹರಣ - ವಿಮರ್ಶಾತ್ಮಕ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡುವ

ನ್ಯೂಸ್​ಕ್ಲಿಕ್​ ಮಾಧ್ಯಮ ಕಚೇರಿಗಳ ಮೇಲೆ ನಡೆದ ಪೊಲೀಸರ ದಾಳಿಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹಲವಾರು ಪತ್ರಕರ್ತರು ಹಾಗೂ ಸಂಘಟನೆಗಳು ಆರೋಪಿಸಿದ್ದಾರೆ.

Journalism: A cornerstone of public welfare
Journalism: A cornerstone of public welfare

By ETV Bharat Karnataka Team

Published : Oct 9, 2023, 1:03 PM IST

ಹೈದರಾಬಾದ್: ವಾಸ್ತವ ಸಂಗತಿಗಳನ್ನು ಸಮಾಜಕ್ಕೆ ತಲುಪಿಸುವುದು ಪತ್ರಿಕೆಗಳು ಮತ್ತು ಮಾಧ್ಯಮಗಳ ಮೂಲಭೂತ ಪಾತ್ರವಾಗಿದೆ. ಸರ್ಕಾರದ ಕೆಲಸಗಳ ಆಂತರಿಕ ಕಾರ್ಯಚಟುವಟಿಕೆಗಳನ್ನು ಜಗತ್ತಿಗೆ ತಿಳಿಸಲು ಕಾರ್ಯನಿರ್ವಹಿಸುವ ಸ್ವತಂತ್ರ ಮಾಧ್ಯಮವು ಯಾವುದೇ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದ ಜೀವನಾಡಿಯಾಗಿರುತ್ತದೆ. ಮಲಯಾಳಂ ಸುದ್ದಿ ಚಾನೆಲ್ "ಮೀಡಿಯಾ ಒನ್" ಮೇಲೆ ಕೇಂದ್ರ ಸರ್ಕಾರ ಹೇರಿದ ನಿಷೇಧವನ್ನು ಸುಪ್ರೀಂ ಕೋರ್ಟ್ ಏಪ್ರಿಲ್​ನಲ್ಲಿ ತೆಗೆದುಹಾಕಿದಾಗ ಮಾಧ್ಯಮಗಳ ಈ ಪಾತ್ರದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಂತಾಗಿತ್ತು.

ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸಾಕಷ್ಟು ಪುರಾವೆಗಳಿಲ್ಲದೇ ಜನರ ಹಕ್ಕುಗಳನ್ನು ಮೊಟಕುಗೊಳಿಸಬಾರದು ಎಂಬ ಸಂದೇಶವನ್ನು ಈ ತೀರ್ಪು ಆಡಳಿತ ನಡೆಸುವ ಸರ್ಕಾರಗಳಿಗೆ ರವಾನಿಸಿತ್ತು. ಆದಾಗ್ಯೂ, ಸುಪ್ರೀಂ ಕೋರ್ಟ್​ನ ಅಂಥ ಅದ್ಭುತ ಸಂದೇಶದ ಹೊರತಾಗಿಯೂ, ಪತ್ರಿಕೋದ್ಯಮದ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿ ನಿಂತಿಲ್ಲ. ಕಳೆದ ಮಂಗಳವಾರ, ಆನ್ಲೈನ್ ಸುದ್ದಿ ಪೋರ್ಟಲ್ 'ನ್ಯೂಸ್​ ಕ್ಲಿಕ್' ಕಚೇರಿಗಳು ಮತ್ತು ಅದರ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ವಿಶೇಷ ಪೊಲೀಸ್ ಘಟಕ ದಾಳಿ ನಡೆಸಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ.

'ನ್ಯೂಸ್ ಕ್ಲಿಕ್' ಸ್ಥಾಪಕ ಸಂಪಾದಕ 76 ವರ್ಷದ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2009 ರಲ್ಲಿ ಪ್ರಾರಂಭವಾದಾಗಿನಿಂದ ವಿಮರ್ಶಾತ್ಮಕ ಪತ್ರಿಕೋದ್ಯಮದ ಭದ್ರಕೋಟೆಯಾಗಿದ್ದ ನ್ಯೂಸ್​ಕ್ಲಿಕ್ ಕಚೇರಿಯನ್ನು ಬಲವಂತವಾಗಿ ಲಾಕ್ ಮಾಡಲಾಯಿತು ಮತ್ತು ಕಾನೂನುಗಳನ್ನು ನಿರ್ಲಕ್ಷಿಸಿ ಅಲ್ಲಿದ್ದ ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡರು.

ವಿಮರ್ಶಾತ್ಮಕ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡುವ ಉದಾತ್ತ ಧ್ಯೇಯದೊಂದಿಗೆ ಸ್ಥಾಪಿತವಾದ 'ನ್ಯೂಸ್ ಕ್ಲಿಕ್' ನಿರಂತರವಾಗಿ ಆಡಳಿತಾರೂಢ ಸರ್ಕಾರಗಳಿಗೆ ವಿರೋಧವಾದ ವರದಿಗಳನ್ನು ಪ್ರಕಟಿಸಿದೆ. ವಿವಾದಕ್ಕೆ ಒಳಗಾದ ಕೃಷಿ ಕಾನೂನುಗಳ ವಿರುದ್ಧ ನಿರಂತರ ರೈತರ ಪ್ರತಿಭಟನೆಗಳ ವ್ಯಾಪಕ ವರದಿಗಳನ್ನು ನ್ಯೂಸ್​ಕ್ಲಿಕ್ ಪ್ರಕಟಿಸಿತ್ತು. ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಹೇಳಿದಂತೆ, ಪತ್ರಿಕೋದ್ಯಮವು ವ್ಯಕ್ತಿಗಳು ಮತ್ತು ಸಂಸ್ಥೆಗಳ ನ್ಯೂನತೆಗಳನ್ನು ಬಹಿರಂಗಪಡಿಸುವ ಪ್ರಬಲ ಸಾಧನವಾಗಿದೆ.

ಮಾಧ್ಯಮಗಳನ್ನು ನಿಯಂತ್ರಿಸಿದರೆ ಮತ್ತು ಸೆನ್ಸಾರ್ ಮಾಡಿದರೆ, ಸತ್ಯವು ಮಸುಕಾಗುತ್ತದೆ ಮತ್ತು ಪ್ರಜಾಪ್ರಭುತ್ವದ ಘನತೆಗೆ ಧಕ್ಕೆಯಾಗುತ್ತದೆ ಎಂದು ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿರುವುದು ಸಮಂಜಸವಾಗಿದೆ. 'ನ್ಯೂಸ್ ಕ್ಲಿಕ್' ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ವಿರುದ್ಧ ದೆಹಲಿ ಪೊಲೀಸರು ಇತ್ತೀಚೆಗೆ ಕೈಗೊಂಡ ಆಕ್ರಮಣಕಾರಿ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಗಂಭೀರ ಅತಿಕ್ರಮಣಕ್ಕೆ ಸಾಕ್ಷಿಯಾಗಿವೆ.

'ನ್ಯೂಸ್ ಕ್ಲಿಕ್' ವಿರುದ್ಧ ಕೈಗೊಳ್ಳಲಾಗುತ್ತಿರುವ ಕ್ರಮಗಳು ಎಲ್ಲೋ ಒಂದು ಕಡೆ ನಡೆಯುತ್ತಿರುವ ವಿರಳ ಘಟನೆಯಲ್ಲ. ಬದಲಾಗಿ ಇವು ಕಿರುಕುಳ ನೀಡುವ ಮಾದರಿಯ ಭಾಗವಾಗಿದೆ. ಎರಡು ವರ್ಷಗಳ ಹಿಂದೆ, ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಮತ್ತು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಸೇರಿದಂತೆ ತನಿಖಾ ಸಂಸ್ಥೆಗಳು ಅಕ್ರಮ ಹಣ ವರ್ಗಾವಣೆಯ ಅನುಮಾನದ ಮೇಲೆ 'ನ್ಯೂಸ್​ ಕ್ಲಿಕ್' ಸಿಬ್ಬಂದಿಯ ಕಚೇರಿಗಳು ಮತ್ತು ನಿವಾಸಗಳಲ್ಲಿ ಶೋಧ ನಡೆಸಿದ್ದವು.

ಈ ಶೋಧದ ಸಮಯದಲ್ಲಿ ಲ್ಯಾಪ್​ಟಾಪ್​ಗಳು ಮತ್ತು ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಕಂಪನಿಯ ಹಣಕಾಸು ವಹಿವಾಟುಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗಿತ್ತು. ಆದರೆ ನ್ಯೂಸ್​ಕ್ಲಿಕ್ ಯಾವುದೇ ಕ್ರಿಮಿನಲ್ ಸ್ವರೂಪದ ಕೃತ್ಯ ಎಸಗಿದೆ ಎಂಬುದನ್ನು ಸಾಬೀತುಪಡಿಸಲು ಆಗ ಸಾಧ್ಯವಾಗಿರಲಿಲ್ಲ. ಅಂದರೆ ನ್ಯೂಸ್​ಕ್ಲಿಕ್ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಿದಂತಾಗಿತ್ತು.

ಟೀಕೆಯನ್ನು ದೇಶದ್ರೋಹ ಮತ್ತು ರಾಷ್ಟ್ರ ವಿರೋಧಿ ಪ್ರಚಾರದ ಕೃತ್ಯವೆಂದು ಸರ್ಕಾರ ನೋಡುತ್ತದೆ ಮತ್ತು ಈ ಮೂಲಕ ಭಿನ್ನಾಭಿಪ್ರಾಯದ ಧ್ವನಿಗಳನ್ನು ಉದ್ದೇಶಪೂರ್ವಕವಾಗಿ ಮಟ್ಟ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಗ್ರಹಿಕೆ ಮೂಡುತ್ತಿರುವುದು ಕಳವಳಕಾರಿಯಾಗಿದೆ. 2021 ರಲ್ಲಿ, ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸಿ 'ನ್ಯೂಸ್​ಕ್ಲಿಕ್​' ಮತ್ತು ಪ್ರಬೀರ್ ಪುರ್ಕಾಯಸ್ಥ ಸೇರಿದಂತೆ ಅದರ ಸಂಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಂತೆ ಇಡಿಗೆ ನಿರ್ದೇಶನ ನೀಡಬೇಕಾಯಿತು.

ಆದಾಗ್ಯೂ ಭಾರತದಲ್ಲಿ ಚೀನಾ ಪರ ಚಟುವಟಿಕೆಗಳಿಗಾಗಿ ನ್ಯೂಸ್​ಕ್ಲಿಕ್​ ಪೋರ್ಟಲ್ ಚೀನಾದಿಂದ ಹಣ ಪಡೆಯುತ್ತಿದೆ ಎಂದು ಆರೋಪಿಸಿ ದೆಹಲಿ ಪೊಲೀಸರು ಕಳೆದ ಆಗಸ್ಟ್​ನಲ್ಲಿ 'ನ್ಯೂಸ್​ಕ್ಲಿಕ್' ವಿರುದ್ಧ ಕಠಿಣ ಯುಎಪಿಎ ಅಡಿ ಪ್ರಕರಣ ದಾಖಲಿಸಿದ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಎಫ್ಐಆರ್ ಪ್ರತಿಯನ್ನು ಬಿಡುಗಡೆ ಮಾಡಲು ಕಾನೂನು ಜಾರಿ ಅಧಿಕಾರಿಗಳ ಆರಂಭಿಕ ಹಿಂಜರಿಕೆಯು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿತು.

ಈ ಆತಂಕಕಾರಿ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ಹಲವಾರು ಪತ್ರಕರ್ತರ ಸಂಘಗಳು ಒಗ್ಗೂಡಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಅರ್ಜಿ ಸಲ್ಲಿಸಿವೆ. ಪತ್ರಿಕೋದ್ಯಮವನ್ನು ಭಯೋತ್ಪಾದನೆ ಎಂದು ಹಣೆಪಟ್ಟಿ ಕಟ್ಟುವ ಪ್ರವೃತ್ತಿಯ ಬಗ್ಗೆ ಅರ್ಜಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ ಮತ್ತು ತನಿಖಾ ಸಂಸ್ಥೆಗಳನ್ನು ಪತ್ರಕರ್ತರ ವಿರುದ್ಧದ ಶಸ್ತ್ರಾಸ್ತ್ರಗಳಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ಎತ್ತಿ ತೋರಿಸಿದೆ.

ಇಂತಹ ಕ್ರಮಗಳು ಮಾಧ್ಯಮಗಳ ಮೇಲೆ ಬೀರಬಹುದಾದ ದುಷ್ಪರಿಣಾಮಗಳನ್ನು ಈ ಪ್ರಕರಣ ಎತ್ತಿ ತೋರಿಸಿದೆ. ಅನೇಕ ಪತ್ರಕರ್ತರು ಈಗ ನಿರಂತರ ಬೆದರಿಕೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ, ಭಿನ್ನಾಭಿಪ್ರಾಯದ ಸಹಿಷ್ಣುತೆ ಮತ್ತು ವಿಭಿನ್ನ ಅಭಿಪ್ರಾಯಗಳಿಗೆ ಗೌರವವು ಆಡಳಿತದ ಆಧಾರಸ್ತಂಭಗಳಾಗಿವೆ. ದುರದೃಷ್ಟವಶಾತ್, ಆಡಳಿತಾರೂಢ ಸರ್ಕಾರಗಳು, ಭಿನ್ನಾಭಿಪ್ರಾಯದ ಧ್ವನಿಗಳೊಂದಿಗೆ ಕೆಲಸ ಮಾಡುವ ಬದಲು ಅವುಗಳನ್ನು ನಿಗ್ರಹಿಸಲು ಮುಂದಾಗಿವೆ. ಆ ಮೂಲಕ ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಮೂಲಾಧಾರವಾದ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಜನರ ಹಕ್ಕನ್ನು ದುರ್ಬಲಗೊಳಿಸಿವೆ.

ತನಿಖಾ ಸಂಸ್ಥೆಗಳನ್ನು ಶಸ್ತ್ರಗಳನ್ನಾಗಿ ಉಪಯೋಗಿಸಿಕೊಳ್ಳುವ ಮೂಲಕ ಸರ್ಕಾರಗಳು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸಂಕೋಲೆಗಳನ್ನು ಬಿಗಿಗೊಳಿಸುತ್ತಿವೆ. ಇದು ನಮ್ಮ ಸಮಾಜದ ಹೃದಯಭಾಗದಲ್ಲಿರಬೇಕಾದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗಂಭೀರ ಬೆದರಿಕೆಯನ್ನು ಉಂಟು ಮಾಡುತ್ತಿದೆ. "ಮಾಧ್ಯಮಗಳು ಯಾವುದೇ ವಿಷಯದ ಬಗ್ಗೆ, ಬಲವಾದ ಭಾಷೆಯನ್ನು ಬಳಸಿ ಪ್ರತಿಕ್ರಿಯಿಸಲು ಸಾಧ್ಯವಾದಾಗ ಮಾತ್ರ ಪತ್ರಿಕಾ ಸ್ವಾತಂತ್ರ್ಯವನ್ನು ನಿಜವಾಗಿಯೂ ಗೌರವಿಸಿದಂತೆ" ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದು ಗಮನಾರ್ಹ. ಭಾರತದಂತಹ ರಾಷ್ಟ್ರದಲ್ಲಿ ಗಾಂಧೀಜಿಯವರಂಥ ಅನೇಕ ನಾಯಕರು ಹುಟ್ಟಿದ್ದಾರೆ. ಆದರೆ ಯಾವುದೇ ಕಠಿಣ ಪ್ರಶ್ನೆಗಳನ್ನು ಎದುರಿಸಲು ಹಿಂಜರಿಯುವ ಕೆಲ ವ್ಯಕ್ತಿಗಳನ್ನು ಮಹಾನ್ ನಾಯಕರೆಂದು ಬಿಂಬಿಸುವ ಪ್ರವೃತ್ತಿ ಆತಂಕಕಾರಿಯಾಗಿದೆ.

ಆಂಧ್ರಪ್ರದೇಶದಲ್ಲಿಯೂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಇದೇ ರೀತಿಯ ಕಠಿಣ ತಂತ್ರವನ್ನು ಬಳಸಿದೆ. ಎರಡು ಮಾಧ್ಯಮಗಳ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಿದೆ. ದುರದೃಷ್ಟವಶಾತ್, ಈ ತಂತ್ರವು ಧೈರ್ಯದಿಂದ ಸತ್ಯವನ್ನು ವರದಿ ಮಾಡುವ ಪತ್ರಕರ್ತರ ವಿರುದ್ಧ ಕಿರುಕುಳ ನೀಡುವ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಆಘಾತಕಾರಿ ಸಂಗತಿಯೆಂದರೆ, 2014 ರಿಂದ 2019 ರವರೆಗೆ ದೇಶಾದ್ಯಂತ 200 ಕ್ಕೂ ಹೆಚ್ಚು ಪತ್ರಕರ್ತರು ಕ್ರೂರ ದಬ್ಬಾಳಿಕೆಗೆ ಬಲಿಯಾಗಿದ್ದಾರೆ. ಅವರಲ್ಲಿ ನಲವತ್ತು ಜನರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಮರ್ಶಾತ್ಮಕ ಪತ್ರಿಕೋದ್ಯಮದ ಬಗ್ಗೆ ಸರ್ಕಾರದ ಅಸಹಿಷ್ಣುತೆ ಹೆಚ್ಚಾಗುತ್ತಿರುವುದರಿಂದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು ನಿರಂತರವಾಗಿ ಕುಸಿಯುತ್ತಿದೆ. 2016 ರಲ್ಲಿ, ಭಾರತವು 180 ದೇಶಗಳಲ್ಲಿ 133 ನೇ ಸ್ಥಾನದಲ್ಲಿತ್ತು. ಆದರೆ ಇದು ಈಗ 150 ನೇ ಸ್ಥಾನಕ್ಕೆ ಕುಸಿದಿದೆ ಮತ್ತು ಇತ್ತೀಚೆಗೆ ಪಟ್ಟಿಯಲ್ಲಿ 161 ನೇ ಸ್ಥಾನಕ್ಕೆ ಇಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ, ನಾರ್ವೆ, ಐರ್ಲೆಂಡ್, ಡೆನ್ಮಾರ್ಕ್, ಸ್ವೀಡನ್ ಮತ್ತು ಫಿನ್ಲ್ಯಾಂಡ್​ನಂಥ ದೇಶಗಳು ಸ್ವತಂತ್ರ ಪತ್ರಿಕೋದ್ಯಮವನ್ನು ಸಕ್ರಿಯವಾಗಿ ಪೋಷಿಸುತ್ತಿವೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ತತ್ವಗಳನ್ನು ಎತ್ತಿಹಿಡಿಯುತ್ತಿವೆ.

ನಿರ್ಭೀತ ಧ್ವನಿಗಳನ್ನು ಹತ್ತಿಕ್ಕುವ ಮತ್ತು ಪತ್ರಕರ್ತರ ಮೇಲೆ ನಿರಂತರ ದಾಳಿಗಳನ್ನು ನಡೆಸುವ ಸಂಘಟಿತ ಪ್ರಯತ್ನಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತಕ್ಕೆ ಸಮಂಜಸವಲ್ಲ. ಇಂತಹ ಪ್ರವೃತ್ತಿಗಳು ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಲ್ಲದೆ, ನಿರಂಕುಶ ದೌರ್ಜನ್ಯಗಳ ಜ್ವಾಲೆಯನ್ನು ಪ್ರಚೋದಿಸುತ್ತವೆ. ಇವು ಅಂತಿಮವಾಗಿ ಜನರ ಜೀವನಗಳನ್ನು ಮತ್ತಷ್ಟು ಸಂಕಷ್ಟಮಯವಾಗಿಸುತ್ತವೆ.

ಇದನ್ನೂ ಓದಿ : ಫೆಸ್ಟಿವಲ್ ಸೇಲ್ ಆರಂಭಿಸಿದ ಅಮೆಜಾನ್, ಫ್ಲಿಪ್​ಕಾರ್ಟ್; 90 ಸಾವಿರ ಕೋಟಿ ರೂ. ಇ-ಕಾಮರ್ಸ್​ ವಹಿವಾಟು ನಿರೀಕ್ಷೆ

ABOUT THE AUTHOR

...view details