ನಾಗರಕರ್ನೂಲ್(ತೆಲಂಗಾಣ): ಕ್ಷುದ್ರ ಪೂಜೆ ಮೂಲಕ ನಿಧಿ ಹುಡಿಕಿಕೊಡುವುದಾಗಿ ನಂಬಿಸಿ 11 ಜನರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಆರೋಪಿಯನ್ನು ನಾಗರಕರ್ನೂಲ್ ಪೊಲೀಸರು ಬಂಧಿಸಿದ್ದಾರೆ. ನಾಗರಕರ್ನೂಲ್ ಪಟ್ಟಣದ ಇಂದಿರಾನಗರ ಕಾಲೋನಿ ನಿವಾಸಿ ರಮತಿ ಸತ್ಯನಾರಾಯಣ ಅಲಿಯಾಸ್ ಸತ್ಯಂ ಯಾದವ್ (47) ಬಂಧಿತ ಆರೋಪಿ.
ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜೋಗುಲಾಂಬ ಗದ್ವಾಲ ವಲಯದ ಡಿಐಜಿ ಎಲ್.ಎಸ್.ಚೌಹಾಣ್, "ಬಂಧಿತ ಆರೋಪಿ ಕ್ಷುದ್ರ ಪೂಜೆಯ ಮೂಲಕ ಗುಪ್ತ ನಿಧಿ ಹುಡುಕಿಕೊಡುವುದಾಗಿ ಹೇಳಿ ಅಮಾಯಕರನ್ನು ನಂಬಿಸಿ ಅವರ ಆಸ್ತಿಗಳನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡು ವಂಚಿಸುತ್ತಿದ್ದ. ನಂತರ ಸಂತ್ರಸ್ತರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ನಿಧಿ ಪತ್ತೆಗೆ ಕ್ಷುದ್ರ ಪೂಜೆ(ಮಾಟಮಂತ್ರ) ಮಾಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ. ಬಳಿಕ ಅವರಿಗೆ ತೀರ್ಥದ ರೂಪದಲ್ಲಿ ಎಮ್ಮೆ ಹಾಲಿಗೆ ವಿಷಕಾರಿ ರಾಸಾಯನಿಕಗಳನ್ನು ಬೆರೆಸಿ ಕೊಡುತ್ತಿದ್ದ. ಅವರು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ ಆರೋಪಿ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುತ್ತಿದ್ದ. ಆರೋಪಿ 2020 ದಿಂದ ಇಲ್ಲಿಯವೆರಗೂ 8 ಪ್ರಕರಣಗಳಲ್ಲಿ ಒಟ್ಟು 11 ಜನರನ್ನು ಕೊಲೆ ಮಾಡಿದ್ದಾನೆ " ಎಂದು ಹೇಳಿದರು.
2020ರಲ್ಲಿ ವನಪರ್ತಿ ಜಿಲ್ಲೆಯ ರೇವಳ್ಳಿ, 2021ರಲ್ಲಿ ಕೊಲ್ಹಾಪುರದಲ್ಲಿ, 2022ರಲ್ಲಿ ನಾಗರಕರ್ನೂಲ್, 2023ರಲ್ಲಿ ಕಲ್ವಕುರ್ತಿ, ನಾಗರಕರ್ನೂಲ್, ಬಳಗಾನೂರು ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆದ್ದವಾಡಗೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ತಲಾ ಒಬ್ಬೊಬ್ಬರನ್ನು ಹತ್ಯೆ ಮಾಡಿದ್ದ. ಕೊಲೆಯಾದವರೆಲ್ಲರೂ ನಾಗರ್ ಕರ್ನೂಲ್ ಮತ್ತು ವನಪರ್ತಿ ಜಿಲ್ಲೆಗಳಿಗೆ ಸೇರಿದವರು. ಆರೋಪಿಯಿಂದ 8 ಮೊಬೈಲ್ ಫೋನ್ಗಳು, 10 ಸಿಮ್ ಕಾರ್ಡ್ ಗಳು, ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವ 5 ಬಾಟಲಿಗಳು, 5 ವಿದ್ಯುತ್ ಡಿಟೋನೇಟರ್ಗಳು, ಮೃತರಿಗೆ ಸೇರಿದ ಒಂದು ಕಾರು ಮತ್ತು 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಒಂದೇ ಪ್ಲಾಟ್ ಅನ್ನು ಇಬ್ಬರು ವ್ಯಕ್ತಿಗಳಿಗೆ ಮಾರಾಟ ಮಾಡಿದ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದೆ. ಸತ್ಯಂ ಯಾದವ್ನ ವಿಚಾರಣೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಮತ್ತೆ ತನಿಖೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.